ರಾಂಚಿ, ಆ 30 (DaijiworldNews/DB): ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟದಿಂದ ಜೀವ ತೆತ್ತ ಘಟನೆ ರಾಂಚಿಯಲ್ಲಿ ನಡೆದಿದೆ.
ಅಂಕಿತಾ ಸಿಂಗ್ (19)ಮೃತ ದುರ್ದೈವಿ. ಆಗಸ್ಟ್ 23ರಂದು ಅಂಕಿತಾ ತನ್ನ ಕೋಣೆಯಲ್ಲಿ ಮಲಗಿದ್ದಾಗ ಶಾರೂಖ್ ಎಂಬಾತ ಕೋಣೆಯ ಕಿಟಕಿಯ ಮೂಲಕ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಸಾವು ಬದುಕಿನ ನಡುವೆ ಆಕೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಳು. ಆಗಸ್ಟ್ 28 ಆಕೆ ಸಾವನ್ನಪ್ಪಿದ್ದಾಳೆ.
ಆತನೊಂದಿಗೆ ಸ್ನೇಹ ಮಾಡುವಂತೆ ಆಗಾಗ ನನ್ನನ್ನು ಬಲವಂತ ಮಾಡುತ್ತಿದ್ದು. ಹತ್ತು ದಿನಗಳ ಹಿಂದೆ ಆರೋಪಿ ಶಾರೂಖ್ ತನ್ನ ಮೊಬೈಲ್ಗೆ ಕರೆ ಮಾಡಿ ನನ್ನೊಂದಿಗೆ ಮಾತನಾಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ನನ್ನ ತಂದೆ ಬಳಿ ಹೇಳಿಕೊಂಡಿದ್ದೆ. ಆತನ ಕುಟುಂಬದವರೊಂದಿಗೆ ಮಾತನಾಡಿ ಬಗೆಹರಿಸುವ ಎಂದು ತಂದೆ ಹೇಳಿದ್ದರು. ಆದರೆ ಆಗಸ್ಟ್ 22ರ ರಾತ್ರಿ ಊಟ ಮಾಡಿ ನಾನು ನನ್ನ ಕೋಣೆಯಲ್ಲಿ ಮಲಗಿದ್ದೆ. ಮರುದಿನ ಬೆಳಗ್ಗೆ ನನ್ನ ಬೆನ್ನಿನಲ್ಲಿ ಸುಡುತ್ತಿರುವ ನೋವು ಮತ್ತು ಕೆಟ್ಟ ವಾಸನೆ ಬಂದಂತಾಯಿತು. ಕೂಡಲೇ ತಂದೆ ಬಳಿ ಓಡಿದೆ. ಅವರು ಬೆಂಕಿ ನಂದಿಸಿ ಆಸ್ಪತ್ರೆಗೆ ಕರೆದೊಯ್ದರು ಎಂದು ಸಾವಿಗೂ ಮುನ್ನ ಅಂಕಿತಾ ಹೇಳಿರುವುದಾಗಿ ವರದಿಯಾಗಿದೆ.
ಬಾಲ್ಯದಲ್ಲೇ ಕ್ಯಾನ್ಸರ್ನಿಂದ ತಾಯಿಯನ್ನು ಕಳೆದುಕೊಂಡಿದ್ದ ಅಂಕಿತಾ ಸಣ್ಣ ಮನೆಯೊಂದರಲ್ಲಿ ತಂದೆ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದಾರೆ. ತಾಯಿಯ ಚಿಕಿತ್ಸೆಗಾಗಿ ಇದ್ದ ಜಮೀನೆಲ್ಲಾ ಮಾರಿದ್ದು, ಜೀವನೋಪಾಯವೇ ದುಸ್ತರವಾಗಿತ್ತು. ಅಂಕಿತಾ ತಂದೆಯ ದಿನದ ಆದಾಯ ಕೇವಲ 200 ರೂ.ಗಳಾಗಿದ್ದು, ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಅಂಕಿತಾ ಪ್ರಾಥಮಿಕ ಶಾಲಾ ಮಕ್ಕಳಿಗೆ ಟ್ಯೂಷನ್ ನೀಡಿ ತಿಂಗಳಿಗೆ ಒಂದು ಸಾವಿರ ರೂ. ಸಂಪಾದಿಸುತ್ತಿದ್ದರು ಎನ್ನಲಾಗಿದೆ. ಪೊಲೀಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದ ಅಂಕಿತಾಳ ಬಾಳಲ್ಲಿ ಪಾಗಲ್ ಪ್ರೇಮಿಯ ಅಟ್ಟಹಾಸದಿಂದಾಗಿ ಆಕೆ ಜೀವವನ್ನೇ ಕಳೆದುಕೊಳ್ಳಬೇಕಾಯಿತು.
ಸದ್ಯ ಆರೋಪಿ ಶಾರುಖ್ನನ್ನು ಜಾರ್ಖಂಡ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಮೃತ ಅಂಕಿತಾ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.