ನವದೆಹಲಿ, ಆ 30 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರದು ಒರಟು ವ್ಯಕ್ತಿತ್ವ ಎಂದೇ ಭಾವಿಸಿದ್ದೆ. ಆದರೆ ಅವರಲ್ಲಿ ಮಾನವೀಯ ಅಂತಃಕರಣವಿದೆ ಎಂದು ಕಾಂಗ್ರೆಸ್ ಮಾಜಿ ನಾಯಕ, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಗುಲಾಂ ನಬಿ ಆಜಾದ್ ಬಣ್ಣಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್ನ ಪ್ರವಾಸಿ ಬಸ್ನೊಳಗೆ ಗ್ರೆನೇಡ್ ಸ್ಪೋಟಗೊಂಡು ನೂರಾರು ಮಂದಿ ಮೃತಪಟ್ಟಿದ್ದರು. ಆ ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ನನಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ಕೇಳಲು ಬಯಸಿದ್ದರು. ಆದರೆ ನಾನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಗ ಮಾತನಾಡಲು ಸಮಯವಿಲ್ಲ ಎನ್ನಲು ಸಿಬಂದಿಗೆ ಹೇಳಿದ್ದೆ ಎಂದು ಸ್ಮರಿಸಿಕೊಂಡರು.
ಕಳೆದ ವರ್ಷ ರಾಜ್ಯ ಸಭೆಯಿಂದ ನಾನು ನಿರ್ಗಮಿಸುವ ಸಂದರ್ಭದಲ್ಲಿ ಮೋದಿಯವರು ಗುಲಾಂ ನಬಿ ಆಜಾದ್ ಅವರು ನನ್ನ ನಿಜವಾದ ಸ್ನೇಹಿತ ಎಂದು ಬಣ್ಣಿಸಿದ್ದರು. ಭಾವನಾತ್ಮಕವಾಗಿಯೇ ನನ್ನನ್ನು ಬೀಳ್ಕೊಟ್ಟಿದ್ದರು. ಅವರಲ್ಲಿ ಮಾನವೀಯ ಅಂತಃಕರಣವಿದೆ ಎಂದರು.