ನವದೆಹಲಿ, ಆ 30 (DaijiworldNews/MS): ಕಾಂಗ್ರೆಸ್ನಲ್ಲಿ ಇದೀಗ ರಾಷ್ಟ್ರೀಯ ಅಧ್ಯಕ್ಷ ಗಾದಿಯನ್ನು ಯಾರು ಹಿಡಿಯುತ್ತಾರೆ ಎನ್ನುವುದೇ ಸಾಕಷ್ಟು ಕುತೂಹಲ ಕೆರಳಿಸಿರುವ ಅಂಶ.
ಒಂದೆಡೆ, ಸ್ವತಃ ರಾಹುಲ್ ಗಾಂಧಿ ಅವರೇ ಪಕ್ಷದ ಚುಕಾಣಿ ಹಿಡಿಯುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಇನ್ನೊಂದೆಡೆ, ಗಾಂಧಿ ಕುಟುಂಬದವರು ಅಧ್ಯಕ್ಷ ಸ್ಥಾನ ಅಲಂಕರಿಸುವುದು ಬೇಡ ಎನ್ನುವ ಕೂಗು ಕೂಡ ಪಕ್ಷದೊಳಗೆ ಕೇಳಿ ಬರುತ್ತಿದೆ. ಪಕ್ಷದೊಳಗೆ ಈ ರೀತಿಯ ಪರಿಸ್ಥಿತಿ ಇರಬೇಕಾದರೆ, ಕಾಂಗ್ರೆಸ್ನ ಹಿರಿಯ ನಾಯಕರಾಗಿರುವ ಕೇರಳದ ಸಂಸದ ಶಶಿ ತರೂರು ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಖುದ್ದು ತರೂರ್ ಅವರು ಮಲೆಯಾಳಂನ ಪ್ರಮುಖ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದು, ಕಾಂಗ್ರೆಸ್ನ 12 ಕಾರ್ಯಕಾರಿ ಸಮಿತಿಗೆ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೇ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವುದರಿಂದ ಕಾಂಗ್ರೆಸ್ನ ಸದ್ಯದ ಕೆಟ್ಟ ಪರಿಸ್ಥಿತಿಗೆ ನವಚೇತನವನ್ನು ಒದಗಿಸುತ್ತದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷಗಾದಿಗೆ ಚುನಾವಣೆ ಕಣದಲ್ಲಿ ಶಶಿ ತರೂರು ಅವರು ಕೂಡ ಸ್ಪರ್ಧೆಗಿಳಿಯಬಹುದು ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ.
ಈ ಹಿಂದೆ 2020ರಲ್ಲಿ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕೆಂದು ಒತ್ತಾಯಿಸಿ ಪತ್ರ ಬರೆದಿದ್ದ 23 ಕಾಂಗ್ರೆಸ್ ನಾಯಕರಲ್ಲಿ ಶಶಿ ತರೂರ್ ಕೂಡ ಸೇರಿದ್ದರು.
ಅಧ್ಯಕ್ಷ ಗಾದಿಗೆ ಸ್ಪರ್ಧಿಸುವ ನಾಯಕರ ಪಟ್ಟಿಯಲ್ಲಿ ಅಶೋಕ್ ಗೆಲ್ಲೋಟ್ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿಯಲ್ಲಿವೆ. ಅ.17ರಂದು ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದಾಗಿ ಈಗಾಗಲೇ ಘೋಷಿಸಲಾಗಿದೆ.