ನವದೆಹಲಿ, ಆ 30 (DaijiworldNews/DB): ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರ ಎಂದು ಕರೆಯಲ್ಪಡುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲಾಗುವ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಅಲ್ಲದೆ, ಪ್ರತಿದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ಕಳವಳಕಾರಿ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಹಿರಂಗಗೊಳಿಸಿದೆ.
2021ರಲ್ಲಿ ದೆಹಲಿಯಲ್ಲಿ ಮಹಿಳೆಯರ ವಿರುದ್ದ 13,892 ಅಪರಾಧ ಪ್ರಕರಣ ದಾಖಲಾಗಿದ್ದು, ಇದರಲ್ಲಿ 3948 ಅಪಹರಣ, 4674 ಗಂಡನಿಂದ ಕ್ರೌರ್ಯ, 136 ವರದಕ್ಷಿಣೆ ಸಾವು, 2,022 ಹಲ್ಲೆ ಮತ್ತು 833 ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣಗಳು, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ 1,357 ಪ್ರಕರಣಗಳು ಸೇರಿವೆ. ಈ ಅಂಕಿ ಅಂಶವು 2020ಕ್ಕಿಂತ ಶೇ. 40ರಷ್ಟು ಹೆಚ್ಚಳ ಕಂಡಿದೆ. ಎಲ್ಲಾ 19 ಮಹಾನಗರಗಳ ವಿಭಾಗದಲ್ಲಿ ಮಹಿಳೆಯರ ಮೇಲಿನ ಒಟ್ಟು ಅಪರಾಧಗಳ ಶೇ. 32.20ರಷ್ಟು ದೆಹಲಿಯಲ್ಲೇ ನಡೆದಿದೆ.
ದೆಹಲಿ ನಂತರ ಮುಂಬೈ ಮತ್ತು ಬೆಂಗಳೂರು ಸ್ಥಾನ ಪಡೆದುಕೊಂಡಿವೆ! ಆರ್ಥಿಕ ರಾಜಧಾನಿ ಮುಂಬೈಯಲ್ಲಿ 5,543 ಪ್ರಕರಣ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 3,127 ಪ್ರಕರಣ ದಾಖಲಾಗಿವೆ.
ದೇಶಾದ್ಯಂತ ಎಲ್ಲಾ 19 ಮಹಾನಗರಗಳಲ್ಲಿ 2021ರಲ್ಲಿ ಮಹಿಳೆಯರ ಮೇಲೆ ನಡೆದ ಅಪರಾಧ ಪ್ರಕರಣಗಳ ಅಂಕಿ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆಗೊಳಿಸಿದ್ದು, ಇಷ್ಟೂ ನಗರಗಳಲ್ಲಿ ಒಟ್ಟು 43,414 ಅಪರಾಧ ಪ್ರಕರಣ ಮಹಿಳೆಯರ ಮೇಲೆ ನಡೆದಿದೆ ಎಂದು ತಿಳಿಸಿದೆ. ಒಟ್ಟು 8,664 ಮಹಿಳೆಯರ ಅಪಹರಣ ಪ್ರಕರಣ, 833 ಮಕ್ಕಳ ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ.