ನವದೆಹಲಿ, ಆ 30 (DaijiworldNews/DB): ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ರಾಜೀನಾಮೆಗೆ ಆಗ್ರಹಿಸಿ ಎಎಪಿ ಶಾಸಕರು ದೆಹಲಿ ವಿಧಾನಸಭೆಯೊಳಗೆ ಸೋಮವಾರ ಅಹೋರಾತ್ರಿ ಧರಣಿ ನಡೆಸಿದ್ದಾರೆ.
2016ರಲ್ಲಿ ಸಕ್ಸೇನಾ ಅವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ದ ವೇಳೆ 1,400 ಕೋಟಿ ರೂ. ಮೌಲ್ಯದ ನೋಟುಗಳನ್ನು ಬದಲಾಯಿಸುವಂತೆ ತಮ್ಮ ಉದ್ಯೋಗಿಗಳ ಮೇಲೆ ಒತ್ತಡ ಹೇರಿದ್ದರು. ಈ ನಿಟ್ಟಿನಲ್ಲಿ ಅವರು ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಶಾಸಕರು ಪಟ್ಟು ಹಿಡಿದರು. ತಮ್ಮ ಆಗ್ರಹದ ಈಡೇರಿಕೆಗಾಗಿ ಎಎಪಿ ಶಾಸಕರು ವಿಧಾನಸಭೆಯಲ್ಲೇ ಅಹೋರಾತ್ರಿ ಧರಣಿ ನಡೆಸಿದರು.
ಎಎಪಿ ಪಕ್ಷದ ಅಹೋರಾತ್ರಿ ಧರಣಿ ಮುಖಾಂತರ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ರಾಜಕೀಯ ಸಮರ ಮತ್ತಷ್ಟು ಹೆಚ್ಚಾಗಿದೆ. ಎಎಪಿ ಶಾಸಕರ ಧರಣಿಯ ನಡುವೆ ಬಿಜೆಪಿ ಶಾಸಕರು ಕೂಡಾ ರಾಜೀನಾಮೆ ಆಗ್ರಹ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಂಪುಟ ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.