ಹುಬ್ಬಳ್ಳಿ, ಆ 29 (DaijiworldNews/SM): ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ 3 ದಿನಗಳ ಕಾಲ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಕಾಶ ನೀಡಿದೆ. ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಅವಕಾಶ ನೀಡಿರುವುದು ಒಳ್ಳೆಯ ನಿರ್ಣಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಾಲಿಕೆಯ ನಿರ್ಣಯವನ್ನ ನಾನು ಸ್ವಾಗತಿಸುತ್ತೇನೆ. ಸೌಹಾರ್ದತೆಯಿಂದ ಗಣೇಶೋತ್ಸವ ಆಚರಣೆ ಮಾಡುವುದು ಸೂಕ್ತ ಎಂದು ಸೂಚಿಸಿದರು. ಈ ಸಂಬಂಧ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಗಣೇಶ ಪ್ರತಿಷ್ಠಾಪನೆಗೆ ಒಟ್ಟು ಆರು ಹಿಂದುಪರ ಸಂಘಟನೆಗಳು ಮನವಿ ಮಾಡಿದ್ದವು. ಸಂಘಟನೆಗಳ ಮನವಿ ಪರಿಶೀಲನೆಗಾಗಿ ಸಮಿತಿಯನ್ನು ರಚಿಸಲಾಗಿತ್ತು ಎಂದು ಹೇಳಿದರು.
ಸಮಿತಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ವರದಿ ನೀಡಿತ್ತು. ಹೀಗಾಗಿ ಆರು ಸಂಘಟನೆಗಳ ಪೈಕಿ ಒಂದು ಸಂಘಟನೆಗೆ ಅವಕಾಶ ನೀಡಲಾಗಿದೆ ಎಂದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲು ಎಡಿಜಿಪಿಗೆ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೂ ಸಹ ನಾನು ಸೂಕ್ತ ಸಲಹೆ ನೀಡಿದ್ದೇನೆ. ಈಗಾಗಲೇ ಎಲ್ಲಾ ರೀತಿಯ ಕಾನೂನು ಸುವ್ಯವಸ್ಥೆ ಆಗಿದೆ. ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಭದ್ರತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಗಣೇಶ ಹಬ್ಬವನ್ನು ಸೌಹಾರ್ದತೆಯಿಂದ ಮಾಡೋಣ. ಇದರಿಂದ ಕಳೆದುಕೊಳ್ಳುವುದೇನೂ ಇಲ್ಲ. ಎಲ್ಲಾ ಶಾಸಕರು, ಸದಸ್ಯರು, ಅಧಿಕಾರಿಗಳ ಗಮನಕ್ಕೆ ತಂದು ಸಮಿತಿ ಈ ನಿರ್ಧಾರ ಕೈಗೊಂಡಿದೆ. ಜನ ಯಾವುದೇ ಉದ್ವೇಗಕ್ಕೊಳಗಾಗದೇ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂದರು.