ಕೊಚ್ಚಿ, ಆ 29 (DaijiworldNews/MS): ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು ಮತ್ತು ಇದು ಅರಾಜಕತೆಯನ್ನು ಹುಟ್ಟುಹಾಕುತ್ತದೆ ಎಂದು ಕೇರಳದ ಪ್ರಮುಖ 'ಹಿಂದೂ ಈಜವ ಸಮುದಾಯ' ನಾಯಕ ಹಾಗೂ ಸಿಎಂ ಪಿಣರಾಯಿ ವಿಜಯನ್ಗೆ ಅತ್ಯಂತ ಆಪ್ತರಾಗಿರುವ ವೆಲ್ಲಪಲ್ಲಿ ನಟೇಶನ್ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಹೆಣ್ಣು ಮತ್ತು ಗಂಡು ಮಕ್ಕಳಿಗೆ ಒಂದೇ ಸಮವಸ್ತ್ರ ಮತ್ತು ಎರಡೂ ಲಿಂಗಗಳ ವಿದ್ಯಾರ್ಥಿಗಳು ಒಟ್ಟಿಗೆ ಕಲಿಸುವ ಲಿಂಗ ತಟಸ್ಥ ನೀತಿ' ಕುರಿತು ಭಾನುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿ ಮಾತನಾಡಿದರು.
ನಾವು ಹುಡುಗಿಯರು ಮತ್ತು ಹುಡುಗರು ತರಗತಿಯಲ್ಲಿ ಜೊತೆಯಾಗಿ ಕುಳಿತುಕೊಳ್ಳುವುದನ್ನು ಬೆಂಬಲಿಸುವುದಿಲ್ಲ. ನಮಗೆ ನಮ್ಮದೇ ಆದ ಸಂಸ್ಕೃತಿ ಇದೆ. ನಾವು ಅಮೆರಿಕ ಅಥವಾ ಇಂಗ್ಲೆಂಡ್ನಲ್ಲಿ ವಾಸಿಸುತ್ತಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳುವುದು, ಅಪ್ಪಿಕೊಳ್ಳುವುದಕ್ಕೆ ಅನುಮತಿಸುವುದಿಲ್ಲ ಎಂದಿದ್ದಾರೆ
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ ಕಾಲೇಜುಗಳಲ್ಲಿ ಓದುತ್ತಿರುವವರು ಒಟ್ಟಿಗೆ ಕುಳಿತು ಒಬ್ಬರನ್ನೊಬ್ಬರು ಅಪ್ಪಿಕೊಳ್ಳಬಾರದು. ಮಕ್ಕಳು ಬೆಳೆದು ಪ್ರಬುದ್ಧತೆ ಪಡೆದ ನಂತರ ಅವರು ಏನು ಬೇಕಾದರೂ ಮಾಡಬಹುದು . ಮಕ್ಕಳು ಒಟ್ಟಿಗೆ ಕುಳಿತು ಪರಸ್ಪರ ಅಪ್ಪಿಕೊಳ್ಳುವುದು ಭಾರತದಲ್ಲಿ ಅಪೇಕ್ಷಣೀಯವಲ್ಲ, ಇದು ಅಪಾಯಕಾರಿ ಎಂದು ಹೇಳಿದ್ದಾರೆ.