ಚಿತ್ರದುರ್ಗ, ಆ 29 (DaijiworldNews/MS): ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಕಾರನ್ನು ಹಾವೇರಿ ಜಿಲ್ಲೆಯ ಬಂಕಾಪುರದ ಬಳಿ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ವದಂತಿ ನಡುವೆಯೇ ಮಠಕ್ಕೆ ವಾಪಸ್ಸು ಬಂದ ಶ್ರೀಗಳು ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
" ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇದೆಲ್ಲದಕ್ಕೂ ಈಗ ತಾರ್ಕಿಕ ಅಂತ್ಯ ಬೇಕಾಗಿದೆ. ನಾವು ಈ ನೆಲದ ಕಾನೂನ್ನು ಗೌರವಿಸುವ ಮಠಾಧೀಶರಾಗಿದ್ದೇವೆ. ನಾವು ಇರುವವರೆಗೂ ಯಾವುದೇ ಪಲಾಯನವಿಲ್ಲ. ಎಲ್ಲರೂ ಸೇರಿ ಸಹನೆ ಮತ್ತು ಬುದ್ದಿವಂತಿಕೆಯಿಂದ ಸಮಸ್ಯೆ ಎದುರಿಸೋಣ. ಇದೇನು ಹೊಸದಲ್ಲ. ಕಳೆದ ೧೫ ವರ್ಷಗಳಿಂದ ಇಂತಹ ಪಿತೂರಿಗಳು ನಡೆಯುತ್ತಿದೆ. ಯಾರು ಸಹ ಆತಂಕಕ್ಕೆ ಒಳಗಾಗುವುದು ಬೇಡ. ಎಲ್ಲಾ ಆರೋಪಗಳಿಂದ ಮುಕ್ತನಾಗಿ ಬರುವೆ ಎಲ್ಲರಿಗೂ ಶುಭವಾಗಲಿ" ಎಂದಿದ್ದಾರೆ.
ಇನ್ನೊಂದೆಡೆ ಶಿವಮೂರ್ತಿ ಮುರುಘಾ ಶರಣರು ಅಜ್ಞಾತ ಸ್ಥಳಕ್ಕೆ ತೆರಳಿದ ಅನುಮಾನ ವ್ಯಕ್ತವಾಗುತ್ತಿದ್ದಂತೆಯೇ , ಪೊಲೀಸರು ಮಠಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸೋಮವಾರ ಬೆಳಿಗ್ಗೆ ಪೊಲೀಸರ ತಂಡ ಮಫ್ತಿಯಲ್ಲಿ ಮಠಕ್ಕೆ ಧಾವಿಸಿ ಮಠದ ಆವರಣದಲ್ಲಿ ಪರಿಶೀಲನೆ ನಡೆಸಿದೆ. ಅಲ್ಲದೆ ಕೆಲ ಪೊಲೀಸರನ್ನು ಮಠದ ಭದ್ರತೆಗೆ ನಿಯೋಜಿಸಲಾಗಿದೆ. ಶ್ರೀಗಳ ವಿರುದ್ದ ಪೋಕ್ಸೊ ಪ್ರಕರಣ ದಾಖಲಾದ ಎರಡು ದಿನಗಳ ಬಳಿಕ ಮಠದ ಆವರಣದಲ್ಲಿ ಪೊಲೀಸರು ಕಾಣಿಸಿಕೊಂಡಿದ್ದಾರೆ.