ನವದೆಹಲಿ, ಆ 29 (DaijiworldNews/MS): ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಕಾಂಗ್ರೆಸ್ ತೊರೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಬಿರುಗಾಳಿ ಎಬ್ಬಿಸಿದ ಜಮ್ಮು ಮತ್ತು ಕಾಶ್ಮೀರದ ನಾಯಕ ಗುಲಾಂ ನಬಿ ಆಜಾದ್ ತಮ್ಮದೇ ಪಕ್ಷವನ್ನು ಸ್ಥಾಪಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಇನ್ನು 14 ದಿನಗಳಲ್ಲಿ ತಮ್ಮ ನೂತನ ಪಕ್ಷದ ಘೋಷಣೆ ಮಾಡಲಾಗುವುದು ಎಂದು ಅವರ ಪಾಳಯದಲ್ಲಿ ಗುರುತಿಸಿಕೊಂಡುವ ಜಮ್ಮು ಕಾಶ್ಮೀರದ ಮಾಜಿ ಸಚಿವ ತಾಜ್ ಮೊಹಿಯುದ್ದೀನ್ ಹೇಳಿದ್ದಾರೆ.
"ನಾವು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ, ಆದರೆ ನಮಗೆ ಸ್ಥಾನಗಳು ಬೇಕಾದರೆ ಎನ್ಸಿ ಅಥವಾ ಪಿಡಿಪಿಯೊಂದಿಗೆ ನಾವು ಸಮ್ಮಿಶ್ರ ಸರ್ಕಾರವನ್ನು ರಚಿಸಬಹುದು. ಆದರೆ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ" ಎಂದು ತಾಜ್ ಮೊಹಿಯುದ್ದೀನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
73 ವರ್ಷದ ಗುಲಾಂ ನಬಿ ಆಜಾದ್ ಆಗಸ್ಟ್ 26 ರಂದು ಕಾಂಗ್ರೆಸ್ನ ತನ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಅವರು ಸೆಪ್ಟೆಂಬರ್ 4 ರಂದು ಜಮ್ಮುವಿಗೆ ಆಗಮಿಸಲಿದ್ದು ಬಳಿಕ ಹೊಸ ಪಕ್ಷ ಘೋಷಿಸಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ
ಇತ್ತೀಚಿನ ತಿಂಗಳುಗಳಲ್ಲಿ ಕಾಂಗ್ರೆಸ್ನ ಹಲವಾರು ಪ್ರಮುಖ ನಾಯಕರು ಪಕ್ಷಕ್ಕೆ ವಿದಾಯ ಹೇಳುತ್ತಿರುವುದರಿಂದ ಕಾಂಗ್ರೆಸ್ಗೆ ದೊಡ್ಡ ಹೊಡೆತ ಬಿದ್ದಿದೆ.