ನವದೆಹಲಿ, ಆ 29 (DaijiworldNews/MS): ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸೋಮವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ.
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು ಲಲಿತ್ ಅವರು ನೇಮಕವಾದ ಬಳಿಕ, ಅವರ ಮೊದಲ ಕೆಲಸದ ದಿನವಾದ ಸೋಮವಾರವೇ ಈ ಮಹತ್ವದ ಅರ್ಜಿ ವಿಚಾರಣೆ ನಡೆಯಲಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡಿರುವ ನ್ಯಾಯ ಪೀಠ ವಿಚಾರಣೆ ನಡೆಸಲಿದೆ.
ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ನ ಮಾರ್ಚ್ 15 ರ ತೀರ್ಪನ್ನು ಪ್ರಶ್ನಿಸುವ ಅರ್ಜಿಗಳು ಹಿಂದಿನ ಸಿಜೆಐ ಎನ್ವಿ ರಮಣ ಅವರ ಅವಧಿಯಲ್ಲಿ ತುರ್ತು ವಿಚಾರಣೆ ಕೋರಿ ವಿವಿಧ ವಕೀಲರು ಹಲವಾರು ಸುತ್ತಿನ ಪ್ರಸ್ತಾಪವನ್ನು ಮಾಡಿದರೂ ಪಟ್ಟಿ ಮಾಡಿರಲಿಲ್ಲ. ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳುವಂತೆ ಅಂದಿನ ಸಿಜೆಐ ಎನ್.ವಿ. ರಮಣ ಹಲವು ಬಾರಿ ಸೂಚಿಸಿದ್ದರು. ಆದರೆ ಈ ಪ್ರಕರಣ ವಿಚಾರಣೆಗೆ ಲಿಸ್ಟ್ ಆಗಿರಲಿಲ್ಲ.