ಚಿತ್ರದುರ್ಗ,ಆ 28 (DaijiworldNews/SM): ರಾಜ್ಯದ ದೊಡ್ಡ ಮಠಗಳಲ್ಲಿ ಒಂದೆನಿಸಿಕೊಂಡಿರೋ ಚಿತ್ರದುರ್ಗದ ಪ್ರಸಿದ್ಧ ಮಠದ ಶ್ರೀಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಬಾಲಕಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಶ್ರೀಗಳಿಗೆ ಕಂಟಕ ಎದುರಾಗುವ ಸಾಧ್ಯತೆ ಇದೆ.
ಶ್ರೀಗಳ ವಿರುದ್ಧ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ ಮಾಡಿರೋ ಆರೋಪ ಕೇಳಿ ಬಂದಿದೆ. ಶ್ರೀಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಈ ಕೇಸ್ನಲ್ಲಿ ಇವತ್ತು ಬಾಲಕಿಯ ವಿಚಾರಣೆ ನಡೆಸಿ, ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ಶ್ರೀಗಳಿಗೆ ಕಂಟಕ ಎದುರಾಗುವ ಸಾಧ್ಯತೆ ಕಾಣ್ತಿವೆ.
ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಆಗಸ್ಟ್ 16ರಂದು ಕೇಸ್ ದಾಖಲಿಸಿ ಒಡನಾಡಿ ಸಂಸ್ಥೆಯ ಬಾಲಕಿಯರ ಕೇಂದ್ರದಲ್ಲೇ ಆಶ್ರಯ ಪಡೆದಿದ್ದ ಸಂತ್ರಸ್ತೆಯರು, ಆಗಸ್ಟ್ 28ರ ಬೆಳಗ್ಗೆ 4 ಗಂಟೆ ಸುಮಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ್ರು. ಬೆಳಗ್ಗೆ 4 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಬಾಲಕಿಯರನ್ನ ಸರ್ಕಾರಿ ಬಾಲಮಂದಿರದಲ್ಲೇ ಇರಿಸಲಾಗಿತ್ತು. ಬೆಳಗ್ಗೆ 10 ಗಂಟೆಗೆ ಅಲ್ಲೇ ಬಾಲಕಿಯರಿಂದ ಹೇಳಿಕೆ ಪಡೆಯಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಡಬ್ಲ್ಯೂಸಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲರ ಸಮ್ಮುಖದಲ್ಲಿ ಬಾಲಕಿಯರ ವಿಚಾರಣೆ ನಡೆದಿದೆ. ದೂರುದಾರರಾಗಿರೋ ಇಬ್ಬರು ಬಾಲಕಿಯರನ್ನ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಹೇಳಿಕೆ ಪಡೆಯಲಾಯ್ತು. ಈ ವೇಳೆ ಮಹಿಳಾ ಸಿಬ್ಬಂದಿಯೇ ಬಾಲಕಿಯರಿಂದ ಹೇಳಿಕೆ ದಾಖಲಿಸಿಕೊಂಡಿದ್ದು, ಅವರ ಪೋಷಕರನ್ನೂ ಅಲ್ಲಿಗೆ ಕರೆಸಲಾಗಿತ್ತು. ಈ ಎಲ್ಲಾ ಪ್ರಕ್ರಿಯೆಯನ್ನ ವಿಡಿಯೋ ರೆಕಾರ್ಡ್ ಕೂಡಾ ಮಾಡಲಾಗಿದೆ.