ಬೆಂಗಳೂರು, ಆ 28 (DaijiworldNews/DB): ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ವತಿಯಿಂದ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಈ ಕುರಿತು ಮಾಹಿತಿ ನೀಡಿದ ಅವರು, ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರು 225 ಕಿ.ಮೀ. ಯಾತ್ರೆ ಸಾಗಿದ್ದಾರೆ. ಇನ್ನು ಉದಯಪುರ ಚಿಂತನ ಮಂಥನ ಶಿಬಿರದಲ್ಲಿ ನಿರ್ಧರಿಸಿದಂತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ 'ಭಾರತ ಐಕ್ಯತಾ ಯಾತ್ರೆ' ನಡೆಯಲಿದೆ. ಇದು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದರೂ ಪಕ್ಷಾತೀತ ಯಾತ್ರೆ ಆಗಿರಲಿದೆ ಎಂದರು.
ಕರ್ನಾಟಕದಲ್ಲಿ 21 ದಿನ ಯಾತ್ರೆ ನಡೆಯಲಿದ್ದು, ಗುಂಡ್ಲುಪೇಟೆಯಿಂದ ರಾಯಚೂರುವರೆಗೆ ಪಾದಯಾತ್ರೆ ಸಾಗಲಿದೆ. ಪಾಲ್ಗೊಳ್ಳಬೇಕಾದ ನಾಯಕರ ಪಟ್ಟಿ ಈಗಾಗಲೇ ಸಿದ್ದವಾಗಿದ್ದು, ಜನಸಾಮಾನ್ಯರು ಪಕ್ಷಾತೀತವಾಗಿ ಭಾಗವಹಿಸಬಹುದು ಎಂದವರು ತಿಳಿಸಿದರು.
ದೇಶದಲ್ಲಿ ಸಾಮಾಜಿಕ ಸಾಮರಸ್ಯ ಕುಸಿಯುತ್ತಿದೆ. ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಮಾನಸಿಕ ಶಕ್ತಿ ತುಂಬುವುದು, ಯುವಕರಿಗೆ ಉದ್ಯೋಗ, ಭ್ರಷ್ಟಾಚಾರರಹಿತ ಸರ್ಕಾರ ರಚನೆ, ಕಾರ್ಮಿಕರಿಗೆ ಉತ್ತಮ ಬದುಕು ಸೇರಿದಂತೆ ವಿವಿಧ ಉದ್ದೇಶಗಳನ್ನು ಹೊತ್ತು ಯಾತ್ರೆ ನಡೆಸಲಾಗುತ್ತಿದೆ. ಪ್ರತಿದಿನ 25 ಕಿ. ಮೀ. ದೂರದ ಪಾದಯಾತ್ರೆ ರಾಜ್ಯದಲ್ಲಿ ನಡೆಯಲಿದೆ. ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ 3,500 ಕಿ.ಮೀ. ಹೆಜ್ಜೆ ಹಾಕಲಿದ್ದಾರೆ ಎಂದು ಡಿಕೆಶಿ ವಿವರಿಸಿದರು.
ಸೆ. 7ರಂದು ಕನ್ಯಾಕುಮಾರಿಯಲ್ಲಿ ಯಾತ್ರೆ ಉದ್ಘಾಟನೆ ನಡೆಯಲಿದ್ದು, ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಉಸ್ತುವಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಲಾಗಿದೆ. ನಾಯಕರು ಸೇರಿದಂತೆ ಭಾಗವಹಿಸಲು ಆಸಕ್ತಿ ಇರುವವರು ನೋಂದಣಿ ಮಾಡಿಕೊಳ್ಳಲು ನೋಂದಣಿಗೆ ಅಧಿಕೃತ ವೆಬ್ಸೈಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸಾರ್ವಜನಿಕ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದರು.