ಧಾರವಾಡ, ಆ 28 (DaijiworldNews/DB): ನಾಯಕತ್ವದ ಅವಧಿ ಮುಗಿದಾಗ ಬೇರೆಯವರಿಗೆ ಬಿಟ್ಟುಕೊಡಬೇಕು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿ ನಡೆಯದಿರುವುದೇ ಹಿರಿಯರು ಪಕ್ಷ ತ್ಯಜಿಸಲು ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಮುಗದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವದ ವಿಚಾರದಲ್ಲಿ ದುರಹಂಕಾರ ಇರುವುದರಿಂದಲೇ ಆ ಪಕ್ಷದಲ್ಲಿ ಹಿರಿಯರು ಅಸಮಾಧಾನಗೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಎಸ್.ಎಂ. ಕೃಷ್ಣ, ಗುಲಾಂ ನಬಿ ಆಜಾದ್ ಅವರಂತವರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಪಕ್ಷದ ಬೆಳವಣಿಗೆ ದೃಷ್ಟಿಯಿಂದ ನಾಯಕತ್ವ ಅವಧಿ ಮುಗಿದಾಗ ಅದನ್ನು ಬೇರೆಯವರಿಗೆ ಬಿಟ್ಟುಕೊಡಬೇಕು ಎಂದರು.
ಮುರುಘಾ ಶ್ರೀ ಮೇಲಿನ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿತ್ರದುರ್ಗ ಸ್ವಾಮೀಜಿ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಬಗ್ಗೆ ನಾನೇನು ಮಾತನಾಡುವುದಿಲ್ಲ. ಸೂಕ್ತ ಮತ್ತು ನ್ಯಾಯಯುತ ತನಿಖೆ ಆಗಲಿ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯವಾಗಿ ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷ. ಆ ಬಳಿಕ ಬದಲಾವಣೆ ಮಾಡಲೇಬೇಕೆಂಬುದಿಲ್ಲ. ಆದರೆ ಮಾಧ್ಯಮಗಳೇ ಬದಲಾವಣೆ ಬಗ್ಗೆ ಹೇಳುತ್ತಿವೆ. ನಮ್ಮಲ್ಲಿ ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದರು.