ಬೆಂಗಳೂರು, ಆ 28 (DaijiworldNews/DB): ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ 164 ದರೋಡೆ ನಡೆಸಿದ ವ್ಯಕ್ತಿ ಮತ್ತು ಆತನಿಗೆ ಸಹಕಾರ ನೀಡಿದ ಆತನ ಕುಟುಂಬದವರನ್ನು ಬೆಂಗಳೂರಿನ ರಾಜಾಜಿನಗರದ ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ( 54) ಹಾಗೂ ಆತನ ಪುತ್ರರಾದ ಬಾಲರಾಜ್, ಮಿಥುನ್, ಸಹೋದರ ವರದರಾಜ್, ಅಳಿಯ ಜಾನ್ ಬಂಧಿತರು. ಪ್ರಮುಖ ಆರೋಪಿ ಪ್ರಕಾಶ್ ಕರ್ನಾಟಕದ ಶಿವಮೊಗ್ಗ, ಕೋಲಾರ ಸೇರಿದಂತೆ ಐದು ರಾಜ್ಯಗಳಲ್ಲಿ 164 ದರೋಡೆಗಳನ್ನು ಮಾಡಿದ್ದ. ಈತ ತನ್ನ 10ನೇ ವಯಸ್ಸಿನಿಂದ ಕಳ್ಳತನದ ಹಾದಿ ಹಿಡಿದಿದ್ದು, ಇಪ್ಪತ್ತಕ್ಕೂ ಹೆಚ್ಚು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದ. ಅಪರಾಧದಲ್ಲಿ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿದ್ದಾನೆ. ಅಲ್ಲದೆ ಈತನಿಗೆ ಬಳ್ಳಾರಿ, ಕೋಲಾರ, ಶಿವಮೊಗ್ಗದಲ್ಲಿ ಮೂವರು ಪತ್ನಿಯರು, ಏಳು ಮಂದಿ ಪುತ್ರರಿದ್ದಾರೆ. ಎಲ್ಲರೂ ಬೇರೆ ಬೇರೆ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದಾರೆ.
ಪ್ರಕಾಶ್ ಸಹೋದರ ವರದರಾಜ್, ಮಕ್ಕಳಾದ ಬಾಲರಾಜ್ ಮತ್ತು ಮಿಥುನ್ ಮತ್ತು ಅಳಿಯ ಜಾನ್ ಅವರು ಆರೋಪಿಗೆ ಸಹಕಾರ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದಾರೆ. ಆಭರಣ ಅಂಗಡಿ, ಹಣಕಾಸು ಕಚೇರಿಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಜೈಲಿನಲ್ಲಿದ್ದುಕೊಂಡೇ ಹೊಸ ಗ್ಯಾಂಗ್ ರಚಿಸುತ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.