ಬೆಂಗಳೂರು, ಆ 28 (DaijiworldNews/DB): ಚೀನಾದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಬಂಡವಾಳಶಾಹಿಗಳ ಹಸ್ತಕ್ಷೇಪ ಕುರಿತು ಇಂದು ನಡೆಯಬೇಕಿದ್ದ ವಿಚಾರ ಸಂಕಿರಣದಲ್ಲಿ ವಿಪಕ್ಷ ನಾಯಕ ಸಿದ್ಷರಾಮಯ್ಯ ಭಾಗವಹಿಸಲು ನಿರಾಕರಿಸಿದ ಕಾರಣ ಕಾರ್ಯಕ್ರಮವೇ ರದ್ದುಗೊಂಡಿದೆ.
ಭಾರತ- ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ ವತಿಯಿಂದ ಭಾನುವಾರ ನಗರದ ಚಿತ್ರಕಲಾ ಪರಿಷತ್ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಅಲ್ಲದೆ ಈ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಚೀನಾ ಪರವಾದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಅವರು ನಿರಾಕರಿಸಿದ್ದರು. ಆದರೆ ವಿಚಾರ ಸಂಕಿರಣದ ಆಮಂತ್ರಣ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಅವರ ಹೆಸರಿತ್ತು. ಇದಕ್ಕೆ ಟ್ವೀಟ್ ಮುಖಾಂತರ ಶನಿವಾರ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕಂಡು ಆಶ್ಚರ್ಯವಾಯಿತು. ಸೈದ್ದಾಂತಿಕವಾಗಿ ನನ್ನ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ದವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಹೇಳಿದ್ದರು. ಸಿದ್ದರಾಮಯ್ಯನವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಕಾರಣ ಆಯೋಜಕರು ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ತೆರಳಿದ್ದ ಸಂಘದ ಪ್ರಮುಖರು ಅವರು ಬರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ನನಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ಮುದ್ರಿಸಲಾಗಿತ್ತು ಎಂದು ಅಸೋಸಿಯೇಶನ್ ಅಧ್ಯಕ್ಷ ಕೆ. ಶ್ರೀನಿವಾಸ್ ಗೌಡ ಮಾಧ್ಯಮವೊಂದಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.
ಚೀನಾಪರವಾದ ಕಾರ್ಯಕ್ರಮದ ಆಮಂತ್ರಣಪತ್ರಿಕೆಯಲ್ಲಿ ಸಿದ್ದರಾಮಯ್ಯ ಹೆಸರಿರುವುದಕ್ಕೆ ಬಿಜೆಪಿ ಮತ್ತು ಬಲಪಂಥೀಯರು ಈ ವಿಚಾರವನ್ನು ಟ್ರೋಲ್ ಮಾಡಿದ್ದರು. ಅಲ್ಲದೆ, ಈ ಕುರಿತು ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದರು.