ನವದೆಹಲಿ, ಆ 28 (DaijiworldNews/DB): ದೇಶದಲ್ಲಿ ಅಪೌಷ್ಠಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆ ನೀಡಿದ್ದಾರೆ.
ಮನ್ ಕೀ ಬಾತ್ನ 92 ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಹರ್ ಘರ್ ತಿರಂಗಾ ಅಭಿಯಾನ ದೇಶದಲ್ಲಿ ಯಶಸ್ವಿಯಾಗಿ ನಡೆದಿದೆ. ಅದ್ದೂರಿ ಅಮೃತ ಮಹೋತ್ಸವವನ್ನು ನಾವೆಲ್ಲರೂ ಆಚರಿಸಿದ್ದೇವೆ. ಇನ್ನು ಅಪೌಷ್ಠಿಕತೆ ನಿವಾರಣೆಗೆ ಪ್ರತಿಯೊಬ್ಬರೂ ತೊಡಗಿಸಿಕೊಳ್ಳೋಣ ಎಂದರು.
ಅಪೌಷ್ಟಿಕತೆಯ ವಿರುದ್ಧ ಹೋರಾಡುವ ಉದ್ದೇಶದಿಂದ ಅಸ್ಸಾಂನ ಬೊಂಗೈ ಗ್ರಾಮದಲ್ಲಿ ಪ್ರಾಜೆಕ್ಟ್ ಪೂರ್ಣಾ ಹೆಸರಿನ ಆಸಕ್ತಿದಾಯಕ ಯೋಜನೆಯನ್ನು ನಡೆಸಲಾಗುತ್ತಿದೆ. ಇದರಡಿಯಲ್ಲಿ ಆರೋಗ್ಯವಂತ ಮಗುವಿನ ತಾಯಿಯು ಪ್ರತಿ ವಾರಕ್ಕೊಮ್ಮೆ ಅಪೌಷ್ಠಿಕ ಮಗುವಿನ ತಾಯಿಯನ್ನು ಅಂಗನವಾಡಿ ಕೇಂದ್ರದಲ್ಲಿ ಭೇಟಿಯಾಗಿ ಪೋಷಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ. ಒಂದು ವರ್ಷದಲ್ಲಿ ಶೇ. 90ಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಈ ಉಪಕ್ರಮ ಅನುಕೂಲವಾಗಿದೆ ಎಂದವರು ತಿಳಿಸಿದರು.
2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಬೇಕೆಂದು ಭಾರತ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದ್ದಕ್ಕೆ 70 ಕ್ಕೂ ಹೆಚ್ಚು ದೇಶಗಳು ಬೆಂಬಲಿಸಿದ್ದವು. ಇದೀಗ ಈ ನಿರ್ಣಯವನ್ನು ವಿಶ್ವಸಂಸ್ಥೆ ಅಂಗೀಕರಿಸಿದೆ. ಪ್ರಾಚೀನ ಕಾಲದಿಂದಲೂ ದೇಶೀಯ ಕೃಷಿ, ಸಂಸ್ಕೃತಿಯ ಭಾಗವಾಗಿರುವ ಸಿರಿ ಧಾನ್ಯಗಳ ವರ್ಷವನ್ನು ನಾವು ಜನಾಂದೋಲನವಾಗಿ ಪರಿವರ್ತಿಸಬೇಕು. ಅಲ್ಲದೆ ಜನರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಅಮೃತ್ ಸರೋವರ್ ಅಡಿಯಲ್ಲಿ ತೆಲಂಗಾಣದಲ್ಲಿ ಅಮೃತ ಸರೋವರ ಅಭಿವೃದ್ಧಿಪಡಿಸಲಾಗುತ್ತಿದೆ. ತೆಲಂಗಾಣದ ವಾರಂಗಲ್, ಮಧ್ಯಪ್ರದೇಶದ ಮಾಂಡ್ಲಾ ಮತ್ತು ಉತ್ತರ ಪ್ರದೇಶದ ಲಲಿತ್ಪುರದಲ್ಲಿ ಅಮೃತ್ ಸರೋವರವನ್ನು ನಿರ್ಮಿಸಲಾಗಿದೆ. ಜಲ ಸಂರಕ್ಷಣೆಗೆ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.