ಜಮ್ಮು ಮತ್ತು ಕಾಶ್ಮೀರ, ಆ 28 (DaijiworldNews/DB): ಹಿಮಾಲಯ ಪರ್ವತ ಚಾರಣದ ವೇಳೆ ದಾರಿ ತಪ್ಪಿ ಪರ್ವತಗಳ ನಡುವೆ ಸಿಲುಕಿದ್ದ ಹಂಗೇರಿಯನ್ ಚಾರಣಿಗನೊಬ್ಬನನ್ನು ಭಾರತೀಯ ಸೇನೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. 30 ಗಂಟೆಗಳ ಸುದೀರ್ಘಕಾರ್ಯಾಚರಣೆ ನಡೆಯಿತು.
ಹಂಗೇರಿಯನ್ ಚಾರಣಿಗ ಹಿಮಾಲಯ ಪರ್ವತಕ್ಕೆ ಚಾರಣ ಕೈಗೊಂಡಿದ್ದ. ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಹಿಮಾಲಯ ಶ್ರೇಣಿಗಳ ಉಮಸಿಲಾ ಪಾಸ್ನಲ್ಲಿ ಆತ ದಾರಿ ತಪ್ಪಿದ್ದ. ಈ ವಿಚಾರ ಭಾರತೀಯ ಸೇನೆಗೆ ಲಭಿಸಿದ ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಧುಮುಕಿದೆ. ಸತತ 30 ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಕೊನೆಗೂ ಚಾರಣಿಗನನ್ನು ರಕ್ಷಿಸಲು ಭಾರತೀಯ ಸೇನೆ ಯಶಸ್ವಿಯಾಗಿದೆ. ಯುವಕನನ್ನು ರಕ್ಷಿಸಿದ ಬಳಿಕ ಭಾರತೀಯ ವಾಯುಪಡೆಯ (ಐಎಎಫ್) ವಿಮಾನದಲ್ಲಿ ಅವರನ್ನು ಚಿಕಿತ್ಸೆಗಾಗಿ ಉಧಮ್ಪುರಕ್ಕೆ ಕರೆದೊಯ್ಯಲಾಯಿತು.
ಚಾರಣಿಗನನ್ನು ರಕ್ಷಿಸಿ ಸುರಕ್ಷಿತವಾಗಿ ಕರೆ ತಂದಿದ್ದಕ್ಕೆ ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಸೇನೆ, ಆಪರೇಷನ್ ಸರ್ಚ್ ಮತ್ತು ರೆಸ್ಕ್ಯೂ ಆಪರೇಷನ್ ಭುಜಾಸ್-ಉಮಾಸಿ ಲಾದಲ್ಲಿ ಭಾಗಿಯಾಗಿರುವ ಸಂಪೂರ್ಣ ತಂಡಕ್ಕೆ ಕೃತಜ್ಞತೆ ಅರ್ಪಿಸಿದೆ. ಹೆಮ್ಮೆಯ ಮತ್ತು ಪರಿಶ್ರಮದ ವಿಚಾರವಿದು ಎಂದು ಕಚೇರಿಯು ಶ್ಲಾಘಿಸಿದೆ.