ರೋಹ್ಟಕ್ (ಹರಿಯಾಣ), ಆ 28 (DaijiworldNews/DB): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ವಿಜೇತೆ ಪೂಜಾ ಸಿಹಾಗ್ ಅವರ ಪತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಸ ಘಟನೆ ಶನಿವಾರ ತಡರಾತ್ರಿ ಹರಿಯಾಣದ ರೋಹ್ಟಕ್ನಲ್ಲಿ ನಡೆದಿದೆ.
ಪೂಜಾ ಸಿಹಾಗ್ ಪತಿ, ರೋಹ್ಟಕ್ನ ಗರ್ಹಿ ಬೋಹಾರ್ ಗ್ರಾಮದ ನಿವಾಸಿ ಅಜಯ್ ನಂದಲ್ ಸಾವನ್ನಪ್ಪಿದವರು. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಅಜಯ್ ನಂದಲ್ ಸಾವಿನ ಸುದ್ದಿ ನಮಗೆ ಲಭಿಸಿತ್ತು. ತತ್ಕ್ಷಣ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರೋಹ್ಟಕ್ ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಕುಮಾರ್ ತಿಳಿಸಿರುವುದಾಗಿ ವರದಿಯಾಗಿದೆ.
ಘಟನೆ ನಡೆದಾಗ ಜಾಟ್ ಕಾಲೇಜಿನ ಬಳಿ ಕೆಲವರು ಮದ್ಯ ಸೇವಿಸಿದ್ದರು ಎಂದು ತಿಳಿದು ಬಂದಿದೆ. ಆದರೆ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.
ಕುಸ್ತಿಪಟು ಪೂಜಾ ಸಿಹಾಗ್ 2022 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳೆಯರ ಫ್ರೀಸ್ಟೈಲ್ 76 ಕೆಜಿ ವಿಭಾಗದ ಫೈನಲ್ನಲ್ಲಿ ಕಂಚಿನ ಪದಕವನ್ನು ಪಡೆದಿದ್ದರು. ಆಸ್ಟ್ರೇಲಿಯಾದ ನವೋಮಿ ಡಿ ಬ್ರೂಯಿನ್ ವಿರುದ್ಧ ಸೆಣಸಾಡಿದ್ದರು.