ಹೈದರಾಬಾದ್, ಆ 28 (DaijiworldNews/DB): ಕಾಂಗ್ರೆಸ್ನಲ್ಲಿ ರಾಜೀನಾಮೆ ಪರ್ವ ಮುಂದುವರಿದಿದ್ದು, ತೆಲಂಗಾಣದಲ್ಲಿ ಪಕ್ಷದ ಪ್ರಮುಖ ಮುಖಂಡರಾಗಿರುವ ಎಂ.ಎ. ಖಾನ್ ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಹುಲ್ ಗಾಂಧಿಯವರೇ ಪಕ್ಷದ ಹಿನ್ನಡೆಗೆ ಕಾರಣ ಎಂದು ಆಪಾದಿಸಿ ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ಎಂ.ಎ. ಖಾನ್ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಹಿಂದಿನ ವೈಭವವನ್ನು ಮರಳಿ ಪಡೆದು ದೇಶ ಮುನ್ನಡೆಸುವಲ್ಲಿ ಸಬಲವಾಗಿದೆ ಮತ್ತು ಅದು ಸಾಧ್ಯ ಎಂಬುದನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪಕ್ಷ ಸಂಪೂರ್ಣ ಎಡವಿದೆ. ರಾಹುಲ್ ಗಾಂಧಿಯವರೇ ಪಕ್ಷದ ಹಿನ್ನಡೆಗೆ ನೇರ ಹೊಣೆಯಾಗಿದ್ದಾರೆ ಎಂದು ಪಕ್ಷದ ಮುಖಂಡರಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿ ಜೀವನದಿಂದಲೇ ಪಕ್ಷದೊಂದಿಗೆ ತೊಡಗಿಸಿಕೊಂಡಿದ್ದ ನಾನು 40 ವರ್ಷಗಳ ಕಾಲ ಪಕ್ಷದಲ್ಲಿ ಸಕ್ರಿಯನಾಗಿದ್ದೆ. ಪಕ್ಷದ ಒಳಿತಿಗಾಗಿ ಜಿ-23 ನಾಯಕರು ಧ್ವನಿ ಎತ್ತಿರುವುದನ್ನೇ ಭಿನ್ನಮತ ಎಂದು ಪರಿಗಣಿಸಿದ ನಾಯಕತ್ವ ಪಕ್ಷದ್ದು ಎಂದವರು ವಿವರಿಸಿದ್ದಾರೆ.
ತಳಮಟ್ಟದಿಂದ ಪಕ್ಷ ಸಂಘಟನೆ, ಸಕ್ರಿಯತೆಗೆ ಪ್ರಯತ್ನವೇ ಇಲ್ಲದಾಗಿದೆ. ಪಂಡಿತ್ ನೆಹರೂ, ಇಂದಿರಾಗಾಂಧಿ, ಸಂಜಯ್ಗಾಂಧಿ, ರಾಜೀವ್ಗಾಂಧಿಯವರ ನಾಯಕತ್ವದ ವೇಳೆ ಇದ್ದ ಬದ್ದತೆ, ಸಮರ್ಪಣಾ ಮನೋಭಾವ ಮುಂದುವರಿಸಲು ಪ್ರಯತ್ನಗಳಿಲ್ಲ. ಇದರಿಂದಾಗಿ ಹಿರಿಯ ಮುಖಂಡರುಗಳು ರಾಜೀನಾಮೆ ನೀಡುವ ಪರಿಸ್ಥಿತಿ ಬಂದೊದಗಿದೆ ಎಂದವರು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಆನಂದ್ ಶರ್ಮಾ, ಗುಲಾಂ ನಬಿ ಆಜಾದ್ ರಾಜೀನಾಮೆ ಸಲ್ಲಿಸಿದ್ದು, ಇದೀಗ ಮತ್ತೊಬ್ಬ ಮುಖಂಡರೂ ರಾಜೀನಾಮೆಯ ಹಾದಿ ಹಿಡಿದಿದ್ದಾರೆ.