ನವದೆಹಲಿ, ಆ 27 (DaijiworldNews/DB): ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿರುವುದಕ್ಕೆ ಓರ್ವ ವ್ಯಕ್ತಿಯನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪರಾಭವಗೊಳ್ಳಲು ಪಕ್ಷದ ನಾಯಕ ರಾಹುಲ್ ಗಾಂಧಿ ಕಾರಣ ಎಂದು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಜಮ್ಮು ಕಾಶ್ಮೀರ ಮಾಜಿ ಸಿಎಂ ಗುಲಾಂ ನಬಿ ಆಜಾದ್ ಅವರು ಪರೋಕ್ಷವಾಗಿ ಆರೋಪಿಸಿದ ಬೆನ್ನಲ್ಲೇ ಸಚಿನ್ ಪೈಲಟ್ ಸೋಮವಾರ ಹೇಳಿಕೆ ನೀಡಿದ್ದಾರೆ.
ಚುನಾವಣೆಯಲ್ಲಿ ಪಕ್ಷ ಸೋತರೆ ಅದಕ್ಕೆ ಓರ್ವ ವ್ಯಕ್ತಿಯನ್ನು ಹೊಣೆಗಾರನನ್ನಾಗಿ ಮಾಡುವುದು ತಪ್ಪು. ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ದದ ಹೋರಾಟಕ್ಕೆ ಪಕ್ಷ ಸದ್ಯ ಸಿದ್ದವಾಗುತ್ತಿದೆ. ಹೀಗಿರುವಾಗ ಇಂತಹ ಆರೋಪಗಳು ಸಲ್ಲ. ತನ್ನ ಜವಾಬ್ದಾರಿಯನ್ನು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯವರು ಸರಿಯಾಗಿ ನಿಭಾಯಿಸಿಲ್ಲದಿರುವಾಗ ವ್ಯಕ್ತಿ ದೂಷಣೆ ಮಾಡುವ ಅವರ ಪತ್ರ ತುಂಬಾ ದುರದೃಷ್ಟಕರವಾಗಿದೆ ಎಂದು ಟೀಕಿಸಿದ್ದಾರೆ.
ಐದು ದಶಕಗಳ ಕಾಲ ಆಜಾದ್ ಅವರಿಗೆ ಪಕ್ಷ ವಿವಿಧ ಹುದ್ದೆಳನ್ನು ನೀಡಿದೆ. ದೇಶ, ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವಶ್ಯಕತೆ ಈಗ ತುಂಬಾ ಇದೆ. ಇಂತಹ ವೇಳೆಯಲ್ಲಿ ಈ ರೀತಿ ಮಾಡಿರುವ ಅವರ ನಿರ್ಧಾರ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.