ನವದೆಹಲಿ, ಆ 27 (DaijiworldNews/DB): ವ್ಯಕ್ತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಮಾಡುವುದನ್ನು ನಿಲ್ಲಿಸಿದ್ದಕ್ಕಾಗಿ ಮೂವರು ವ್ಯಕ್ತಿಗಳು ಬಾಲಕಿ ಮೇಲೆ ಗುಂಡು ಹಾರಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಬಿ ಮತ್ತು ಪವನ್ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಅರ್ಮಾನ್ ಅಲಿ ಪರಾರಿಯಾಗಿದ್ದಾನೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾದ 16 ವರ್ಷದ ಬಾಲಕಿ ಗುರುವಾರ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದು ಮೂವರು ಆರೋಪಿಗಳು ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ಸಂತ್ರಸ್ತೆಯ ಭುಜಕ್ಕೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿರುವುದು ತಿಳಿದು ಬಂದಿದೆ.
ಬಾಲಕಿಯೊಂದಿಗೆ ಕಳೆದೆರಡು ವರ್ಷಗಳಿಂದ ಅರ್ಮಾನ್ ಅಲಿ ಸಾಮಾಜಿಕ ತಾಣದಲ್ಲಿ ಸಂಪರ್ಕದಲ್ಲಿದ್ದನು. ಆರು ತಿಂಗಳ ಹಿಂದೆ ಆಕೆ ಆತನೊಂದಿಗೆ ಚಾಟಿಂಗ್ ನಿಲ್ಲಿಸಿದ್ದಳು. ಇದರಿಂದ ಆಕೆಯ ಮೇಲೆ ದಾಳಿ ಮಾಡಲು ಆತ ಸಂಚು ರೂಪಿಸಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಬಂಧಿತ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿದ್ದು, ಮೂವರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.