ನವದೆಹಲಿ, ಆ 27 (DaijiworldNews/DB): ದೇಶದ ಕೋಟ್ಯಾಂತರ ಬಡವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪರ ಕಾರ್ಯಕ್ರಮಗಳಿಂದಾಗಿ ಅಸ್ತಿತ್ವ ಕಂಡು ಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದ ಮೋದಿ@20 ಪುಸ್ತಕ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ದೇಶವು ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಹಲವು ಮಂದಿ ಬಡವರು ಅಸ್ತಿತ್ವ ಕಂಡುಕೊಳ್ಳಲು ಮೋದಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳೇ ಕಾರಣವಾಗಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಇಂತಹ ಬದಲಾವಣೆ ಸಾಧ್ಯವಾಗಿದೆ ಎಂದರು.
ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಾವೆಲ್ಲರೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಫಲಾನುಭವಿ ಜನಗಳೇ ಹೇಳುತ್ತಿದ್ದಾರೆ. ಪ್ರಬಲ ನಾಯಕತ್ವದಿಂದ ಇಂತಹ ಬದಲಾವಣೆ ಸಾಧ್ಯ ಎನ್ನುವುದನ್ನು ಮೋದಿಯವರು ನಿರೂಪಿಸಿದ್ದಾರೆ ಎಂದವರು ಶ್ಲಾಘಿಸಿದರು.