ಕೊಲ್ಕತಾ, ಆ 27 (DaijiworldNews/DB): ಭಾರತದಿಂದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಎಸ್ಎಫ್ ಸಿಬಂದಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಎಸ್ಎಫ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ನನ್ನು ಶುಕ್ರವಾರ ತಡರಾತ್ರಿ ಬಂಧಿಸಿ ಪಶ್ಚಿಮ ಬಂಗಾಳ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಅಲ್ಲದೆ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿನ ಬೆಗ್ದಾ ಗಡಿ ಬಳಿ ಆಗಸ್ಟ್ 26ರಂದು ಮುಂಜಾನೆ ಘಟನೆ ನಡೆದಿದೆ. ಮಹಿಳೆಯೊಬ್ಬಳು ಅಕ್ರಮವಾಗಿ ಭಾರತದಿಂದ ಬಾಂಗ್ಲಾದೊಳೆಗೆ ನುಗ್ಗಲು ಯತ್ನಿಸುತ್ತಿದ್ದಳು. ಈ ವೇಲೆ ಅಲ್ಲೇ ಇದ್ದ ಬಿಎಸ್ಎಫ್ ಕಾನ್ಸ್ ಟೇಬಲ್ ಆಕೆಯನ್ನು ಹೊಲದೊಳಗೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತನ ಕೃತ್ಯಕ್ಕೆ ಎಎಸ್ಐ ನೆರವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಚಾರ ಎಸಗಿರುವ ಕುರಿತು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ಹೀಗಾಗಿ ಇಬ್ಬರನ್ನೂ ಬಂಧಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.