ನವದೆಹಲಿ, ಆ 27 (DaijiworldNews/DB): ನೀಟ್ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಒಳ ಉಡುಪು ತೆಗೆಯುವಂತೆ ಕೇರಳದ ವಿದ್ಯಾರ್ಥಿನಿಯರಿಗೆ ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿಂತೆ ಘಟನೆಯಲ್ಲಿ ಮನನೊಂದ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅವಕಾಶ ನೀಡಿದೆ.
ಘಟನೆಯಿಂದ ಮನನೊಂದ ವಿದ್ಯಾರ್ಥಿನಿಯರಿಗೆ ಸೆಪ್ಟೆಂಬರ್ 4ರಂದು ನೀಟ್ ಮರು ಪರೀಕ್ಷೆ ನಡೆಯಲಿದೆ. ಕೇರಳದ ಕೊಲ್ಲಂ ಸಹಿತ ದೇಶದ ಆರು ಕೇಂದ್ರಗಳಲ್ಲಿ ಮನನೊಂದ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆ ನಡೆಯಲಿದೆ. ಈ ಕುರಿತು ವಿದ್ಯಾರ್ಥಿನಿಯರಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗಿದೆ.
ಜುಲೈ 17ರಂದು ಕೇರಳದ ಕೊಲ್ಲಂನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳುವ ಮೊದಲು ಒಳ ಉಡುಪು ತೆಗೆಯುವಂತೆ ಹೇಳಲಾಗಿತ್ತು. ಇದರಿಂದ ವಿದ್ಯಾರ್ಥಿನಿಯರು ವಿಚಲಿತರಾಗಿದ್ದರು. ವಿದ್ಯಾರ್ಥಿನಿಯೋರ್ವರ ತಂದೆ ಕೊಟ್ಟಾರಕರ ಪೊಲೀಸರಿಗೆ ಈ ಸಂಬಂಧ ದೂರು ಸಲ್ಲಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಈ ವಿಚಾರ ತೀರ್ವ ವಿರೋಧಕ್ಕೆ ಕಾರಣವಾಗಿತ್ತು.
ಕೊಲ್ಲಂ ಹೊರತುಪಡಿಸಿ ರಾಜಸ್ತಾನದ ಶ್ರೀ ಗಂಗಾನಗರ, ಮಧ್ಯ ಪ್ರದೇಶದ ಹೊಶಾಂಗ್ಬಾದ್, ಉತ್ತರ ಪ್ರದೇಶದ ಖುಷಿನಗರ, ಮಧ್ಯಪ್ರದೇಶದ ಬಿಂಧ್ ಮತ್ತು ರಾಜಸ್ತಾನದ ನಾಗೌರ್ನಲ್ಲಿ ನೀಟ್ ಮರು ಪರೀಕ್ಷೆ ನಡೆಯಲಿದೆ. ಇಲ್ಲಿ ವಿವಿಧ ಕಾರಣಗಳಿಂದಾಗಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುತ್ತಿದ್ದು, ಮೊದಲ ಪರೀಕ್ಷೆಗೆ ಹಾಜರಾದವರಿಗಾಗಿ ಮಾತ್ರ ಮರು ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ.