ಉತ್ತರಾಖಂಡ, ಆ 27 (DaijiworldNews/DB): ಅಗ್ನಿವೀರ್ ನೇಮಕಾತಿ ರ್ಯಾಲಿಯಲ್ಲಿ ವಿಫಲವಾದದ್ದಕ್ಕೆ ಮನನೊಂದು ಅಭ್ಯರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಗುಡ್ಡಗಾಡು ರಾಜ್ಯದ ಪೌರಿ ಗರ್ವಾಲ್ ಜಿಲ್ಲೆಯ ನೌಗಾಂವ್ ಕಮಂದ ಗ್ರಾಮದ ನಿವಾಸಿ ಸುಮಿತ್ ಕುಮಾರ್(23) ಆತ್ಮಹತ್ಯೆಗೆ ಶರಣಾದ ಅಭ್ಯರ್ಥಿ. ಕೋಟ್ದ್ವಾರದಲ್ಲಿ ನಡೆದ ಅಗ್ನಿವೀರ್ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಆತ ಇದರಲ್ಲಿ ಆಯ್ಕೆಯಾಗಿರಲಿಲ್ಲ. ವಯಸ್ಸಿನ ಮಿತಿ ಕಾರಣದಿಂದ ಮುಂದಿನ ವರ್ಷ ಮತ್ತೆ ರ್ಯಾಲಿಯಲ್ಲಿ ಭಾಗವಹಿಸಲು ಆತನಿಗೆ ಅವಕಾಶವೂ ಇರಲಿಲ್ಲ. ಇದರಿಂದ ಮನನೊಂದು ಸುಮಿತ್ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೋಳೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821