ಬೆಂಗಳೂರು, ಆ 27 (DaijiworldNews/DB): ಬಿಜೆಪಿ, ಆರೆಸ್ಸೆಸ್ಗೆ ಹೆದರಿ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಆದರೆ ಇದು ಸರಿಯಾದ ನಡೆ ಅಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂನಬಿ ಅಜಾದ್ ಅವರದು ಕಾಂಗ್ರೆಸ್ನಲ್ಲಿ ನಾಲ್ಕೂವರೆ ದಶಕಗಳ ಸೇವೆ. ಎಲ್ಲಾ ರೀತಿಯ ಅಧಿಕಾರವನ್ನು ಪಕ್ಷ ಅವರಿಗೆ ನೀಡಿದೆ. ಆದರೆ ಇದೀಗ ಅವರು ಬಿಜೆಪಿ, ಆರೆಸ್ಸೆಸ್ಗೆ ಹೆದರಿ ರಾಜೀನಾಮೆ ನೀಡಿರುವುದು ಸರಿಯಲ್ಲ ಎಂದರು.
ಪಕ್ಷದ ಮಟ್ಟದಲ್ಲಿ ಅವರು ಉತ್ತಮ ಸ್ಥಾನ ಪಡೆದಿದ್ದರು. ಆದರೆ ಪಕ್ಷದಲ್ಲಿ ಹಲವು ವರ್ಷ ಅಧಿಕಾರ ಅನುಭವಿಸಿ ಈಗ ಹೊರ ಹೋಗಿ ಪಕ್ಷದ ವಿರುದ್ದ ಆಪಾದನೆ ಮಾಡುತ್ತಿರುವುದು ಸಮರ್ಥನೀಯ ಬೆಳವಣಿಗೆ ಅಲ್ಲ. ಸದ್ಯ ಪಕ್ಷಕ್ಕೆ ಒಳ್ಳೆಯ ಪರಿಸ್ಥಿತಿ ಇಲ್ಲದ ಕಾರಣ ಈ ಸಂಕಷ್ಟದ ಸಮಯದಲ್ಲಿ ಜೊತೆ ನಿಲ್ಲುವ ಕೆಲಸ ಮಾಡಬೇಕಿತ್ತು. ಆದರೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿ ರಾಜೀನಾಮೆ ನೀಡಿರುವುದು, ಆರೋಪ ಮಾಡಿರುವುದು ಹಿರಿಯ ನಾಯಕರಾದ ಅವರಿಗೆ ಸೂಕ್ತ ಎನಿಸುವುದಿಲ್ಲ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.