ದಿಂಡೋರಿ, ಆ 27 (DaijiworldNews/DB): ಸಮುದಾಯದ ಸಂಪ್ರದಾಯ ಪಾಲನೆಗಾಗಿ ಪತ್ನಿಯ ಶವವನ್ನು ಸರ್ಕಾರಿ ಶಿಕ್ಷಕನೋರ್ವ ಮನೆಯಲ್ಲೇ ಹೂತ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನೆರೆಹೊರೆಯವರ ವಿರೋಧದ ಬಳಿಕ ಸ್ಮಶಾನಕ್ಕೆ ಶವವನ್ನು ಸ್ಥಳಾಂತರಿಸಲಾಗಿದೆ.
ಸರ್ಕಾರಿ ಶಿಕ್ಷಕ ಓಂಕಾರ್ ದಾಸ್ ಮೊಗ್ರೆ (50) ಅವರ ಪತ್ನಿ ರುಕ್ಮಿಣಿ (45) ಕಣ ರೋಗದಿಂದ ಮಂಗಳವಾರ ಮೃತಪಟ್ಟಿದ್ದರು. ಮೃತ ಪತ್ನಿಯನ್ನು ಸಮುದಾಯದ ಸಂಪ್ರದಾಯದ ಪ್ರಕಾರ ತಮ್ಮ ಮನೆಯ ವರಾಂಡದಲ್ಲಿಯೇ ಹೂಳಿದ್ದಾರೆ. ಇದಕ್ಕೆ ಸ್ಥಳೀಯ ನಿವಾಸಿಗಳು ಮತ್ತು ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರೂ ಅವರು ಕೇಳಿರಲಿಲ್ಲ. ಅಲ್ಲದೆ 'ಪಣಿಕಾ ಸಮುದಾಯದಲ್ಲಿ ಮನೆಯ ಸದಸ್ಯರು ಮೃತಪಟ್ಟರೆ ಅವರನ್ನು ಮನೆ ಆವರಣದಲ್ಲೇ ಸಮಾಧಿ ಮಾಡುವ ಸಂಪ್ರದಾಯವಿದೆ ಎಂದು ವಿರೋಧ ವ್ಯಕ್ತಪಡಿಸಿದವರಿಗೆ ಹೇಳಿದ್ದರು. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಮೊಗ್ರೆ ಅವರ ಮನವೊಲಿಸಿ ಬಳಿಕ ಶವವನ್ನು ಹೊರತೆಗೆದು ಸ್ಮಶಾನಕ್ಕೆ ಕೊಂಡೊಯ್ಯಲಾಗಿದೆ.
ಸಮಯದಾಯದ ಪದ್ದತಿಯನ್ನು ಉಲ್ಲೇಖಿಸಿ ಪತ್ನಿ ಶವವನ್ನು ಮನೆ ವರಾಂಡದಲ್ಲಿ ಹೂಳಿದ್ದಾರೆ. ಬಳಿಕ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಕಾರಣ ಬೇರೆಡೆಗೆ ಶವವನ್ನು ಸ್ಥಳಾಂತರಿಸಲಾಯಿತು ಎಂದು ಕೋತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಸಿ.ಕೆ. ಸಿರಮೆ ತಿಳಿಸಿರುವುದಾಗಿ ವರದಿಯಾಗಿದೆ.