ನವದೆಹಲಿ, ಆ 27 (DaijiworldNews/DB): ಜಿಎಸ್ಟಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಸಂಗ್ರಹಿಸಿದ ಹಣವನ್ನು ಶಾಸಕರನ್ನು ಭೇಟೆಯಾಡಲು ಬಿಜೆಪಿ ಬಳಸುತ್ತಿದೆ. ಇದುವರೆಗೆ 277 ಶಾಸಕರನ್ನು ದೇಶಾದ್ಯಂತ ಆ ಪಕ್ಷ ಖರೀದಿಸಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶುಕ್ರವಾರ ಮಾಡಿದ ಭಾಷಣದಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೋಟೆ ಗುಜರಾತ್ನಲ್ಲಿ ಅಪಾಯದಂಚಿನಲ್ಲಿದೆ. ಕುಸಿತದ ಅಪಾಯವನ್ನೂ ಎದುರಿಸುತ್ತಿದೆ. ಹೀಗಾಗಿ ಮುಂಬರುವ ಚುನಾವಣೆ ಅವರ ಎದುರು ಆತಂಕ ಸೃಷ್ಟಿಸಿದೆ. ಇದೇ ಕಾರಣದಿಂದ ಬಿಜೆಪಿ ನಮ್ಮ ಮೇಲೆ ಇಡಿ, ಸಿಬಿಐ ದಾಳಿಗಳನ್ನು ಮಾಡಿಸುತ್ತಿದೆ. ಡಿಸಿಎಂ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಡೆದಿದೆಯಾದರೂ ಅವರ ಮನೆಯಲ್ಲಿ ಒಂದು ಪೈಸೆಯೂ ಅಧಿಕಾರಿಗಳಿಗೆ ಸಿಗಲಿಲ್ಲ ಎಂದರು.
ಮಣಿಪುರ, ಗೋವಾ, ಮಧ್ಯಪ್ರದೇಶ, ಬಿಹಾರ, ಅರುಣಾಚಲಪ್ರದೇಶ, ಮಹಾರಾಷ್ಟ್ರದಲ್ಲಿ ಸರ್ಕಾರ ಉರುಳಿಸಿದ್ದಾರೆ. ದೆಹಲಿ ಸರ್ಕಾರ ಉರುಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಟೊಂಕ ಕಟ್ಟಿ ನಿಂತಿವೆ. ಎಎಪಿ ಶಾಸಕರ್ಯಾರೂ ಪಕ್ಷಾಂತರ ಮಾಡಿಲ್ಲ. ಇದನ್ನು ಸಾಬೀತುಪಡಿಸಲು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ತರಲಾಗುವುದು ಎಂದವರು ಇದೇ ವೇಳೆ ತಿಳಿಸಿದರು.
ನಮ್ಮ ಶಾಲೆಗಳಲ್ಲಿ ತನಿಖೆ ನಡೆಸಲು ಲೆಫ್ಟಿನೆಂಟ್ ಗವರ್ನರ್ ಮುಂದಾಗಿದ್ದಾರೆ. ಶಾಲೆ, ಆಸ್ಪತ್ರೆಗಳಲ್ಲಿ ಒಳ್ಳೆಯ ಕೆಲಸಗಳು ನಡೆಯುವುದು ಅವರಿಗೆ ಇಷ್ಟ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಬಿಜೆಪಿ ಹಲವು ಸರ್ಕಾರಗಳನ್ನು ಕಿತ್ತೊಸೆದು ಈಗ ದೆಹಲಿಯತ್ತ ಮುಖ ಮಾಡಿದೆ, ಸರ್ಕಾರದ ಸರಣಿ ಕೊಲೆಗಾರ ದೇಶದಲ್ಲಿದ್ದು, ಎಲ್ಲಾ ಸರ್ಕಾರಗಳನ್ನು ಕೊಲ್ಲುವುದೇ ಆತನ ಕೆಲಸವಾಗಿದೆ ಎಂದು ಚಾಟಿ ಬೀಸಿದರು.