ನವದೆಹಲಿ, ಆ 27 (DaijiworldNews/DB): ಬಿಜೆಪಿ ಸಂಸದೀಯ ಮಂಡಳಿಗೆ ನೇಮಕಗೊಂಡ ಬಳಿಕ ಮೊದಲ ಬಾರಿಗೆ ದೆಹಲಿಗೆ ತೆರಳಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರಿಷ್ಠರನ್ನು ಭೇಟಿಯಾಗಿ ಶುಕ್ರವಾರ ಮಾತುಕತೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವಂತೆ ಪ್ರಧಾನಿಯವರು ವಿಎಸ್ವೈ ಅವರಿಗೆ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಎಲ್ಲಾ ನಾಯಕರು ಒಮ್ಮತದಿಂದ ಮುಂದಿನ ಚುನಾವಣೆಗೆ ಸಿದ್ದರಾಗಬೇಕು. ರಾಜ್ಯಾದ್ಯಂತ ಪ್ರವಾಸ ಮಾಡಿ ಸರ್ಕಾರಗಳ ಜನಪರ ಯೋಜನೆಗಳನ್ನು ಜನಮನಕ್ಕೆ ತಲುಪಿಸಬೇಕು ಎಂದು ಮೋದಿ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.