ಜಮ್ಮು, ಆ 27 (DaijiworldNews/DB): ಅರ್ನಿಯಾ ಸೆಕ್ಟರ್ನಲ್ಲಿ ಗಡಿಯೊಳೆಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ನುಸುಳುಕೋರನನ್ನು ಭದ್ರತಾ ಪಡೆ ಯೋಧರು ಶನಿವಾರ ಬಂಧಿಸಿದ್ದಾರೆ.
ಪಾಕಿಸ್ತಾನದ ಸಿಯಾಲಕೋಟ್ ನಿವಾಸಿ ಮೊಹಮ್ಮದ್ ಶಬದ್ ಬಂಧಿತ ನುಸುಳುಕೋರ. ಈತ ಅರ್ನಿಯಾ ಸೆಕ್ಟರ್ನಲ್ಲಿ ಗಡಿಯೊಳಗೆ ನುಸುಳಿ ಬರಲು ಯತ್ನಿಸುತ್ತಿದ್ದ. ಕೂಡಲೇ ಕಾರ್ಯಾಚರಣೆಗಿಳಿದ ಭದ್ರತಾ ಪಡೆ ಯೋಧರು ಆತನನ್ನು ವಶಕ್ಕೆ ಪಡೆದುಕೊಂಡರು. ಬಂಧಿತನಲ್ಲಿ ಯಾವುದೇ ಶಸ್ತ್ರಾಸ್ತ್ ಅಥವಾ ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಸಾಂಬಾ ಜಿಲ್ಲೆಯಲ್ಲಿ ಆಗಸ್ಟ್ 25ರಂದು ಗಡಿಯಲ್ಲಿ ನುಸುಳಲು ಯತ್ನಿಸಿದ ಪಾಕಿಸ್ತಾನ ನುಸುಳುಕೋರನನ್ನು ಬಿಎಎಸ್ಎಫ್ ಯೋಧರು ಗುಂಡೇಟು ನೀಡಿ ತಡೆದಿದ್ದರು. ಗುಂಡೇಟಿನಿಂದ ಗಾಯಗೊಂಡಿದ್ದಾತ ತಪ್ಪಿಸಿಕೊಂಡು ಮತ್ತೆ ಪಾಕಿಸ್ತಾನಕ್ಕೆ ಮರಳಿದ್ದ. ಈ ವೇಳೆ ಘಟನಾ ಸ್ಥಳವನ್ನು ಪರಿಶೀಲಿಸಿದಾಗ ಸುಮಾರು 8 ಕೆ.ಜಿ ಹೆರಾಯಿನ್ ಪತ್ತೆಯಾಗಿತ್ತು. ಅದನ್ನು ವಶಕ್ಕೆ ಪಡೆಯಲಾಗಿತ್ತು.