ಕಲಬುರಗಿ, ಆ 27 (DaijiworldNews/DB): ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ಭಯಗೊಂಡ ಕೈದಿಯೊಬ್ಬ ತಪ್ಪಿಸಿಕೊಂಡು ಓಡಿಹೋದ ಸಂದರ್ಭದಲ್ಲಿ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಕಲಬುರಗಿಯ ಜಿಮ್ಸ್ ಆವರಣದಲ್ಲಿ ನಡೆದಿದೆ.
ಶೇಖ ಜಾವೇದ್ ಅಲಿಯಾಸ್ ಮುನ್ನಾ ಮೃತಪಟ್ಟ ಕೈದಿ. ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈತನ ಬಂಧನಕ್ಕಾಗಿ ಬಂಧನ ವಾರೆಂಟ್ ಹೊರಡಿಸಿತ್ತು. ಹೀಗಾಗಿ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವವರಿದ್ದರು. ಇದಕ್ಕೂ ಮುನ್ನ ಆತನನ್ನು ವೈದ್ಯಕೀಯ ತಪಾಸಣೆಗೆ ಪೊಲೀಸರ್ ಜಿಮ್ಸ್ಗೆ ಕರೆ ತಂದಿದ್ದರು. ಬಳಿಕ ಕೊರೊನಾ ತಪಾಸಣೆಗಾಗಿ ಕೊರೊನಾ ವಾರ್ಡ್ಗೆ ಕರೆದೊಯ್ಯುವ ವೇಳೆ ಆತ ಕೊರೊನಾ ತಪಾಸಣೆಗೆ ಹೆದರಿ ತಪ್ಪಿಸಿಕೊಂಡು ಓಡಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳುವುದಕ್ಕಾಗಿ ಆಸ್ಪತ್ರೆಯ ಮಹಡಿಯನ್ನು ಏರಿದ್ದು, ಪೊಲೀಸರು ಈತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆತ ಮೇಲಂತಸ್ತಿನಿಂದ ಜಿಗಿದಿದ್ದು, ಕೆಳಗೆ ಮೆಟ್ಟಿಲು ಇದ್ದ ಕಾರಣ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ಎಂಟು ತಿಂಗಳ ಹಿಂದೆ ಈತನ ಸಹೋದರ ಪಬ್ಲಿಕ್ ಗಾರ್ಡನ್ನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಕಳವು ಮಾಡಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಜೆಡಿಎಸ್ ಕಚೇರಿ ಸಮೀಪವಿರುವ ಬಾವಿಗೆ ಬಿದ್ದು ಸಾವನ್ನಪ್ಪಿದ್ದ ಎಂದು ವರದಿಗಳು ತಿಳಿಸಿವೆ.