ಪಣಜಿ, ಆ 27(DaijiworldNews/MS): ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರ ಸಾವಿನ ತನಿಖೆ ಮಹತ್ವದ ತಿರುವು ಪಡೆದಿದ್ದು, ಅವರದ್ದು ಹೃದಯಾಘಾತದಿಂದಾದ ಸಾವಲ್ಲ, ಅದು ಕೊಲೆ ಎಂದು ಗೋವಾ ಪೊಲೀಸರು ದೃಢಪಡಿಸಿದ್ದಾರೆ.
ಅಂಜುನಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಐಜಿಪಿ ಓಂವೀರ್ ಸಿಂಗ್ ಬಿಷ್ಣೋಯ್, ಫೋಗಾಟ್ ಅವರ ಆಪ್ತರಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಬಿಎಜೆಪಿ ನಾಯಕಿಗೆ ಒತ್ತಾಯಪೂರ್ವಕವಾಗಿ ವಿಷಯುಕ್ತ ಪಾನೀಯ ಕುಡಿಸಿ ಕೊಂದಿದ್ದಾರೆ. ಕೊಲೆ ಮಾಡಿರುವುದನ್ನು ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು
ಗುರುವಾರ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಫೋಗಾಟ್ ಅವರ ದೇಹದ ಮೇಲೆ ಹಲ್ಲೆಯ ಗಾಯದ ಗುರುತುಗಳಿದ್ದವು. ಗೋವಾ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ತಜ್ಞರು ಫೋಗಾಟ್ ಸಾವಿನ ಕಾರಣವನ್ನು ರಾಸಾಯನಿಕವನ್ನು ವಿಶ್ಲೇಷಣೆ ನಡೆಸುವವರೆಗೂ ಬಹಿರಂಗಪಡಿಸಿರಲಿಲ್ಲ ಎಂದು ಬಿಷ್ಣೋಯ್ ತಿಳಿಸಿದರು.
ಅಂಜುನಾದ ಕರ್ಲೀಸ್ ರೆಸ್ಟೋರೆಂಟ್ನಿಂದ ಕಲೆ ಹಾಕಿರುವ ಸಾಕ್ಷ್ಯ ಮತ್ತು ಸಿಸಿಟಿವಿ ಕ್ಯಾಮೆರಾ ದೃಶ್ಯಗಳಿಂದ ಫೋಗಾಟ್ ಜತೆಗೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಆಪ್ತರು ಆಕೆ ಕುಡಿದ ಪಾನೀಯದಲ್ಲಿ ವಿಷ ಬೆರೆಸಿರುವುದು ಮತ್ತು ಆಕೆ ನಿಯಂತ್ರಣ ಕಳೆದುಕೊಂಡು ಬಿದ್ದಾಗ ಆಕೆಯನ್ನು ಎತ್ತಿಕೊಂಡು ಹೋಗಿ, ಮತ್ತೊಮ್ಮೆ ಒತ್ತಾಯಪೂರ್ವಕವಾಗಿ ವಿಷಮಿಶ್ರಿತ ಪಾನೀಯ ಕುಡಿಸುತ್ತಿರುವುದುಕಂಡುಬಂದಿದೆ ಎಂದು ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸೋನಾಲಿ ಫೋಗಾಟ್ ಅವರು ತಮ್ಮ ಆಪ್ತರೊಂದಿಗೆ ರಜೆ ಕಳೆಯಲು ಗೋವಾದಲ್ಲಿದ್ದರು. ಫೋಗಾಟ್ ಸಾವಿನಲ್ಲಿ ಏನೋ ಸಂಚು ಇದೆ ಎಂಬುದಾಗಿ ಅವರ ಕುಟುಂಬ ಸದಸ್ಯರು ಆರೋಪಿಸಿದ್ದರು. ಜತೆಗೆ ಫೋಗಾಟ್ ಅವರ ಸಹೋದರಿಯರು, ಆಕೆ ನಮಗೆ ಕರೆ ಮಾಡಿ ಸೋಮವಾರ ರಾತ್ರಿ ತಾನು ಸೇವಿಸಿದ ಆಹಾರದ ಬಗ್ಗೆ ಹೇಳಿಕೊಂಡಿದ್ದು ತನ್ನ ವಿರುದ್ದ ಏನೋ ಸಂಚು ನಡೆಯುತ್ತಿದೆ ಎಂದು ಹೇಳಿಕೊಂಡಿದ್ದರು.
ಸೋನಾಲಿ ಫೋಗಾಟ್ ಅವರ ಸಾವಿನ ಸಂಬಂಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಆಕೆಯ ಸಹೋದರ ರಿಂಕು ಢಾಕಾ ಒತ್ತಾಯಿಸಿದಾಗಲೂ, ಫೋಗಾಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದರು.
ಫೋಗಾಟ್ ಅವರ ಹತ್ಯೆಗೆ ರಾಜಕೀಯ ಉದ್ದೇಶ ಅಥವಾ ಹಣಕಾಸು ವಿಷಯವೇ ಎನ್ನುವುದು ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಗೋವಾ ಕಾಂಗ್ರೆಸ್ ಒತ್ತಾಯಿಸಿದೆ.
ಹರಿಯಾಣದಲ್ಲಿ ಅಂತ್ಯಕ್ರಿಯೆ: ಹರಿಯಾಣದ ರಿಷಿ ನಗರದ ಸ್ಮಶಾನದಲ್ಲಿ ಸೋನಾಲಿ ಫೋಗಾಟ್ ಅವರ ಅಂತ್ಯಕ್ರಿಯೆ ನೆರವೇರಿತು. 13 ವರ್ಷದ ಮಗಳು ಯಶೋಧರ ಹಾಗೂ ಕುಟುಂಬ ಸದಸ್ಯರು ಕಣ್ಣೀರಿನ ವಿದಾಯ ಹೇಳಿದರು.ಮಗಳು ಯಶೋಧರ ಧಾರ್ಮಿಕ ಕ್ರಿಯೆ ನಡೆಸಿದ್ದಾರೆ