ಬೆಂಗಳೂರು, ಆ 26 (DaijiworldNews/SM): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಿಂದ ಹಿಡಿದು ಸಚಿವರು, ಶಾಸಕರವರೆಗೆ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಸರಣಿ ಟ್ವೀಟ್ ಮಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರ ನಡೆಸಿಲ್ಲ ಎಂದಾದರೆ ತನಿಖೆಗೆ ಹೆದರಿಕೊಳ್ಳುತ್ತಿರುವುದು ಏಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪ್ರಸ್ತುತ ರಾಜ್ಯ ಬಿಜೆಪಿ ಸರ್ಕಾರದಲ್ಲಿರುವವರು ಎಲ್ಲರೂ ಸತ್ಯಹರಿಶ್ಚಂದ್ರರು ಆಗಿದ್ದರೆ ತನಿಖೆಗೆ ಯಾಕೆ ಹೆದರಿಕೊಳ್ಳುತ್ತಿದ್ದಾರೆ?. ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಲಿ. ಆರೋಪಗಳು ಕೇಳಿಬಂದಾಗ ತನಿಖೆ ನಡೆಸಿ ಸತ್ಯಾಸತ್ಯತೆ ಜನತೆಯ ಮುಂದಿಡುವುದು ಸರ್ಕಾರದ ಕರ್ತವ್ಯ ಅಲ್ಲವೇ ಎಂದರು. ಕಮಿಷನ್ ಹಾವಳಿಗೆ ಬೇಸತ್ತ ಗುತ್ತಿಗೆದಾರರು ಕಳೆದ ವರ್ಷವೇ ಪ್ರಧಾನಿಗಳಿಗೆ ಪತ್ರ ಬರೆದಿದ್ದರು. ಇದರ ನಂತರವೂ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ. ಗುತ್ತಿಗೆದಾರರಿಗೆ ಕಿರುಕುಳ ಹೆಚ್ಚಾಗಿದೆಯಂತೆ. ತನಿಖೆಗೆ ಆದೇಶಿಸಿದರೆ ಎಲ್ಲ ಪುರಾವೆಗಳನ್ನು ಕೊಡಲು ಸಿದ್ಧನಿದ್ದೇನೆ ಎಂದು ಸಂಘದ ಅಧ್ಯಕ್ಷರೇ ಹೇಳಿರುವಾಗ ರಾಜ್ಯ ಸರ್ಕಾರ ಏಕೆ ಒಪ್ಪುತ್ತಿಲ್ಲ. ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದಿದ್ದಾರೆ.