ನವದೆಹಲಿ, ಆ 26 (DaijiworldNews/SM): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಬಿಜೆಪಿ ರಾಜ್ಯ ಸರ್ಕಾರಗಳ ಸರಣಿ ಹಂತಕ ಎಂದು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ದೆಹಲಿ ಸಚಿವರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳು ಇತ್ತೀಚೆಗೆ ನಡೆಸಿದ ದಾಳಿಗಳು ಗುಜರಾತ್ ಚುನಾವಣೆಗೆ ಸಂಬಂಧಿಸಿವೆ ಎಂದು ಆರೋಪಿಸಿದರು.
ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೆಹಲಿ ಸಿಎಂ, ಕೇಂದ್ರ ಸರ್ಕಾರ ಹಣ ಬಳಸಿ ಹಲವು ರಾಜ್ಯ ಸರ್ಕಾರಗಳನ್ನು ಬುಡಮೇಲು ಮಾಡಿದೆ. ಸರ್ಕಾರಗಳನ್ನು ಉರುಳಿಸುವ ಸರಣಿ ಹಂತಕನಂತೆ ವರ್ತಿಸುತ್ತಿದೆ. ಆದರೆ ಎಎಪಿ ಶಾಸಕರು ಪಕ್ಷಾಂತರ ಮಾಡಿಲ್ಲ ಎಂದು ಸಾಬೀತುಪಡಿಸಲು ತಾವು ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಾಗಿ ತಿಳಿಸಿದರು.
"ಗುಜರಾತ್ನಲ್ಲಿ ಬಿಜೆಪಿಯ ಭಧ್ರ ಕೋಟೆ ಅಪಾಯದಲ್ಲಿದೆ ಮತ್ತು ಈಗ ಕುಸಿಯುತ್ತಿದೆ. ಮುಂಬರುವ ಗುಜರಾತ್ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ನಮ್ಮ ಮೇಲೆ ಇಡಿ, ಸಿಬಿಐ ದಾಳಿ ನಡೆಸುತ್ತಿದೆ" ಎಂದು ಆರೋಪಿಸಿದರು.