ನವದೆಹಲಿ, ಆ 26 (DaijiworldNews/DB): ಬಿಜೆಪಿಯೇತರ ರಾಜ್ಯಗಳ ಸರ್ಕಾರಗಳನ್ನು ಉರುಳಿಸುವುದರ ಮೂಲಕ ಕೇಂದ್ರ ಸರ್ಕಾರವು ಸರಣಿ ಹಂತಕನಂತೆ ವರ್ತಿಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಶುಕ್ರವಾರ ನಡೆದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಬಿಜೆಪಿಯೇತರ ಸರ್ಕಾರಗಳು ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಿರುವುದರಿಂದ ಪ್ರಧಾನಿ ಮೋದಿಯವರಿಗೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ಅಂತಹ ರಾಜ್ಯಗಳಲ್ಲಿ ಸರಣಿ ಹಂತಕನಂತೆ ಕೇಂದ್ರ ವರ್ತನೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮಾಡಿರುವ ಉತ್ತಮ ಕೆಲಸಗಳಿಗೆ ಕೇಜ್ರೀವಾಲ್ ಬೆಂಬಲಿಸಿದ್ದಾರೆ. ಆದರೆ ಮೋದಿಯವರು ಅಂತಹ ಯಾವ ಬೆಂಬಲವನ್ನೂ ನೀಡಿಲ್ಲ ಎಂದರು.
ಸಿಬಿಐ ಅಧಿಕಾರಿಗಳು ದಿನವಿಡೀ ನನ್ನ ಮನೆಯಲ್ಲಿ ಹುಡುಕಾಡಿದ್ದಾರೆ. ಮಕ್ಕಳ ಬಟ್ಟೆಗಳನ್ನೂ ಹುಡುಕಿದ್ದಾರೆ. ಆದರೆ ಅವರಿಗೆ ಯಾವುದೇ ದಾಖಲೆ ನನ್ನ ಮನೆಯಲ್ಲಿ ಸಿಕ್ಕಿಲ್ಲ. ನನ್ನ ವಿರುದ್ದ ದಾಖಲಾಗಿರುವ ಎಫ್ಐಆರ್ ನಕಲಿಯಾಗಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ ಎಂದವರು ತಿಳಿಸಿದರು.
ರಾಜ್ಯ ಸರ್ಕಾರಗಳನ್ನು ಕೆಡವಲು ಅವರು ಹಾಕುತ್ತಿರುವ ಶ್ರಮವನ್ನು ಆಸ್ಪತ್ರೆ, ಶಾಲೆಗಳನ್ನು ನಿರ್ಮಿಸಲು ಹಾಕಿದ್ದರೆ ಇಂದು ಬಡ ಜನರು ಉತ್ತಮ ಜೀವನವನ್ನು ಕಾಣುತ್ತಿದ್ದರು ಎಂದು ಇದೇ ವೇಳೆ ಸಿಸೋಡಿಯಾ ಕೇಂದ್ರದ ನಡೆಯ ವಿರುದ್ದ ವಿಷಾದ ವ್ಯಕ್ತಪಡಿಸಿದರು.
ಅಬಕಾರಿ ನೀತಿ ಜನರಿಗೆ ಹೊರೆಯಾಗುವುದಿಲ್ಲ. ಸರ್ಕಾರದ ಆದಾಯವೂ ಹೆಚ್ಚುತ್ತದೆ. ಆದಾಗ್ಯೂ ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಹೊರಿಸಲಾಗುತ್ತಿದೆ. ಆಪರೇಷನ್ ಕಮಲ ಮಾಡಿ ದೆಹಲಿ ಸರ್ಕಾರ ಉರುಳಿಸಲು ಸಂಚು ರೂಪಿಸುತ್ತಿದ್ದಾರೆ ಎಂದವರು ಆಪಾದಿಸಿದರು.