ಬೆಂಗಳೂರು, ಅ 26(DaijiworldNews/MS): ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್- ಬಿಜೆಪಿ ಮಧ್ಯೆ ಸಾವರ್ಕರ್ ವಿವಾದ ಜೋರಾಗಿರುವ ನಡುವೆ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶನ ಮೂರ್ತಿ ಮುಂದೆ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಭಾವಚಿತ್ರ ಇಡುವ ಅಭಿಯಾನ ಹಮ್ಮಿಕೊಳ್ಳುವುದಾಗಿ ಬಿಜೆಪಿ ಹೇಳಿಕೊಂಡಿದೆ.
ಇದಕ್ಕೆ ವ್ಯಂಗ್ಯವಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಘ್ನ ನಿವಾರಕ ವಿನಾಯಕನಿಗೂ , ವಿನಾಯಕ್ ದಾಮೋದರ್ ಸಾವರ್ಕರ್ ಎತ್ತಣದ ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಗಣೇಶೋತ್ಸವಕ್ಕೆ ಬಾಲ ಗಂಗಾಧರ್ ತಿಲಕ್ ಫೋಟೋ ಹಂಚಿದರೆ ಅದಕ್ಕೆ ಅರ್ಥ ಇದೆ. ಗಣೇಶ ಉತ್ಸವಕ್ಕೆ ತಿಲಕ್ ಅವರು ಶಕ್ತಿ ತುಂಬಿದವರು. ವಿಘ್ನ ನಿವಾರಣೆ ಮಾಡುವವನು ವಿನಾಯಕ. ಆ ವಿನಾಯಕನಿಗೂ ಸಾವರ್ಕರ್ಗೂ ಏನು ಸಂಬಂಧ ? ಈ ರೀತಿ ಮಾಡುವುದರಿಂದ ಬಿಜೆಪಿ ತನ್ನ ವಿಚಾರಧಾರೆಯನ್ನು ಹಾಗೂ ದೇಶದ ವಿಚಾರಧಾರೆಯನ್ನು ಕುಂಠಿತ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಆಗಸ್ಟ್ 28 ಹಾಗೂ 29ರಂದು ಎರಡು ದಿನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ರಾಜ್ಯಕ್ಕೆ ಭೇಟಿ ನೀಡಲಿದ್ದು ಬಳಿಕ ದೆಹಲಿಯಿಂದ ಸೆಪ್ಟೆಂಬರ್ 1ರಂದು ಕಾಂಗ್ರೆಸ್ ತಂಡವೊಂದು ರಾಜ್ಯಕ್ಕೆ ಭೇಟಿ ನೀಡಲಿದೆ. ಈ ತಂಡ ರಾಜ್ಯದಲ್ಲಿ ಹಾದು ಹೋಗಲಿರುವ ʼಭಾರತ್ ಜೋಡೋʼ ಯಾತ್ರೆಯ ರೂಪುರೇಷೆ ಮತ್ತು ಸಿದ್ಧತೆ ಬಗ್ಗೆ ರಾಜ್ಯ ಘಟಕದೊಂದಿಗೆ ಚರ್ಚೆ ಮಾಡಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ.