ಬೆಂಗಳೂರು, ಅ 26(DaijiworldNews/MS): ಕಮಿಷನ್ ದಂಧೆ ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಶುರುವಾಗಿದ್ದು, ಇದು ಕೂಡಾ ಆಪರೇಷನ್ ಕಮಲದ ಕೂಸು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ , ಕಮಿಷನ್ ಕೇಳಿದರೆ ಕಾಮಗಾರಿ ಮಾಡುವುದಿಲ್ಲವೆಂದು ಒಂದು ವರ್ಷ ಗುತ್ತಿಗೆದಾರರು ಕೆಲಸ ನಿಲ್ಲಿಸಿ ಬಿಸಿ ಮುಟ್ಟಿಸಿ ಆಗ ತಂತಾನೆ ಎಲ್ಲವೂ ಸರಿ ಆಗುತ್ತದೆ. ಪರ್ಸೆಂಟೇಜ್ ಕೊಡಲು ಹೋಗಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಇದಲ್ಲದೇ ಟೆಂಡರ್ ನಲ್ಲಿ ಭಾಗವಹಿಸುವುದನ್ನು ಗುತ್ತಿಗೆದಾರರು ಬಿಟ್ಟು ಬಿಡಬೇಕು. ಪರ್ಸಂಟೇಜ್ ಕೇಳಿರುವುದ ವಿರುದ್ದ ದಾಖಲೆಗಳನ್ನು ಇಟ್ಟು ಬೀದಿಗೆ ಇಳಿದು ಪ್ರತಿಭಟನೆ ಮಾಡಿ . ಸುಮ್ಮನೆ ಹೇಳಿಕೆ ಕೊಟ್ಟರೆ ಯಾವ ಪ್ರಯೋಜನ ಆಗೋದಿಲ್ಲ ಎಂದು ಹೇಳಿದ್ದಾರೆ.
2008ರಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಆಪರೇಷನ್ ಕಮಲದ ಪ್ರಕ್ರಿಯೆಗಳು ಪ್ರಾರಂಭ ಮಾಡಿಕೊಂಡ ಮೇಲೆ ಹಣದ ಮೂಲಕ ಏನು ಬೇಕಾದರೂ ಸಾಧಿಸಬಹುದೆಂಬ ನಿರ್ಮಾಣವನ್ನು ಬಿಜೆಪಿ ನಾಯಕರು ಸೃಷ್ಟಿಸಿದರು. ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ ಎಂದು ಮಾಜಿ ಸಿಎಂ ನೇರವಾಗಿ ಆರೋಪಿಸಿದ್ದಾರೆ.