ಭುವನೇಶ್ವರ, ಆ 26 (DaijiworldNews/DB): ಪ್ರಿಯಕರನ ಬ್ಲ್ಯಾಕ್ಮೇಲ್ನಿಂದ ಮನನೊಂದು ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದಲ್ಲಿ ನಡೆದಿದೆ.
ಶ್ವೇತಾ ಉತ್ಕಲ್ಕುಮಾರಿ ಆತ್ಮಹತ್ಯೆ ಮಾಡಿಕೊಂಡಾಕೆ. ಆಕೆ ತನ್ನನ್ನು ತಾನೇ ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈಕೆಯ ಪ್ರಿಯಕರ ಸೌಮ್ಯಜಿತ್ ವಿರುದ್ದ ಪೋಷಕರು ದೂರು ದಾಖಲಿಸಿದ್ದಾರೆ. ಭುವನೇಶ್ವರದ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಶ್ವೇತಾ ಸೌಮ್ಯಜಿತ್ನನ್ನು ಪ್ರೀತಿಸುತ್ತಿದ್ದಳು. ಆಗಾಗ್ಗೆ ಇಬ್ಬರೂ ಹೊರಗಡೆ ಸುತ್ತಾಡುತ್ತಿದ್ದರು. ಇದನ್ನೇ ಬಳಸಿಕೊಂಡ ಸೌಮ್ಯಜಿತ್ ಆಕೆಯ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಪಬ್ವೊಂದರಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಆನಂತರ ಮದುವೆಯಾಗಬೇಕಾದರೆ 30 ಲಕ್ಷ ರೂ. ವರದಕ್ಷಿಣೆ ನೀಡಬೇಕೆಂದು ಬೇಡಿಕೆಯಿಟ್ಟಿದ್ದ. ಇದಕ್ಕೆ ಶ್ವೇತಾ ನಿರಾಕರಿಸಿದ್ದಳು. ಬಳಿಕ ಆಕೆಯ ಖಾಸಗಿ ಫೋಟೋಗಳನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದಾನೆ. ಹಣ ನೀಡದೇ ಇದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿದ್ದ. ಇದರಿಂದ ಮನನೊಂದ ಶ್ವೇತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆತ್ಮಹತ್ಯೆಗೂ ಮುನ್ನ ಸೌಮ್ಯಜಿತ್ಗೆ ಹದಿನೈದಕ್ಕೂ ಹೆಚ್ಚು ಬಾರಿ ಆಕೆ ಕರೆ ಮಾಡಿದ್ದಳಾದರೂ, ಆತ ಫೋನ್ ಸ್ವೀಕರಿಸಿಲ್ಲ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಬಳಿಕ ಶ್ವೇತಾಳ ಫೋನ್ ಕರೆ ಮತ್ತು ಡೈರಿ ಪರಿಶೀಲಿಸಿದಾಗ ಆತನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ ಅಥವಾ ದುಷ್ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಸದ್ಯ ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.