ನವದೆಹಲಿ, ಆ 26 (DaijiworldNews/DB): ದೇಶದಲ್ಲಿ 5G ಸೇವೆಗಳ ಕಾರ್ಯಾಚರಣೆಗೆ ತಯಾರಿ ನಡೆಯುತ್ತಿದೆ. ಈ ದಶಕದ ಅಂತ್ಯದ ವೇಳೆಗೆ 6ಜಿ ಇಂಟರ್ನೆಟ್ ಸೇವಾರಂಭಕ್ಕೂ ಸಿದ್ದತೆಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022ರ ಗ್ರ್ಯಾಂಡ್ ಫಿನಾಲೆಯ ಸಂದರ್ಭದಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಅವರು, ಗೇಮಿಂಗ್ ಮತ್ತು ಮನರಂಜನೆಯಲ್ಲಿ ಆತ್ಮನಿರ್ಭರ ಪರಿಹಾರ ಕ್ರಮಗಳ ಪ್ರೋತ್ಸಾಹಕ್ಕೆ ಸರ್ಕಾರ ಉತ್ಸುಕವಾಗಿದೆ. ಕೃಷಿ, ಆರೋಗ್ಯ ಕ್ಷೇತ್ರದಲ್ಲೂ ಡ್ರೋನ್ ತಂತ್ರಜ್ಞಾನ ಉತ್ತೇಜಿಸಲಾಗುತ್ತಿದೆ. ಇವುಗಳಿಂದ ಯುವಕರು ಲಾಭ ಪಡೆದುಕೊಳ್ಳುವಂತಾಗಬೇಕು ಎಂದರು.
ಪ್ರತಿ ಕ್ಷೇತ್ರವೂ ಆಧುನಿಕಗೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. ಡಿಜಿಟಲ್ ಕ್ರಾಂತಿ, ಟ್ಯಾಲೆಂಟ್ ಕ್ರಾಂತಿ, ಆರೋಗ್ಯ ಕ್ರಾಂತಿ, ಮೂಲ ಸೌಕರ್ಯ ಕ್ರಾಂತಿ ಭಾರತದಲ್ಲಾಗುತ್ತಿರುವುದು ಹೆಮ್ಮೆಯ ವಿಚಾರ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, 5ಜಿ ತಂತ್ರಜ್ಞಾನದ ಸೇವೆ ಈ ಅಕ್ಟೋಬರ್ ವೇಳೆಗೆ ಲಭ್ಯವಾಗಬಹುದು. ಇದಕ್ಕಾಗಿ ಹಲವು ನೆಟ್ವರ್ಕ್ ಉದ್ಯಮಗಳು ನೇಮಕಾತಿ ಪ್ರಾರಂಭಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ಈ ಸೇವೆ ದೇಶದ ಕಟ್ಟಕಡೆಯ ಭಾಗಕ್ಕೂ ತಲುಪಲಿದೆ ಎಂದು ತಿಳಿಸಿದರು.