ಬೆಂಗಳೂರು, ಆ 26 (DaijiworldNews/DB): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಯಾರಿಸುತ್ತಿರುವ ಪುನೀತ್ ಉಪಗ್ರಹ ನ.15ರಿಂದ ಡಿ.31ರ ನಡುವೆ ಶ್ರೀಹರಿಕೋಟಾದ ಕೇಂದ್ರದಿಂದ ಉಡಾವಣೆಗೊಳ್ಳಲಿದೆ.
ವಿಕಾಸಸೌಧದಲ್ಲಿ ಈ ಉಪಗ್ರಹ ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಈ ವಿಚಾರ ತಿಳಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದಲೇ 75 ಉಪಗ್ರಹಗಳನ್ನು ಅಭಿವೃದ್ದಿಪಡಿಸುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಇದೀಗ ಬೆಂಗಳೂರು ವಲಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು 1.90 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಿದ 'ಕೆಜಿಎಸ್3ಸ್ಯಾಟ್ ಉಪಗ್ರಹ ಬಹುತೇಕ ಅಂತಿಮ ಹಂತದ ತಯಾರಿಯಲ್ಲಿದೆ. ನ.15ರಿಂದ ಡಿ.31ರ ನಡುವೆ ಈ ಉಪಗ್ರಹದ ಉಡಾವಣೆ ನಡೆಯಲಿದೆ ಎಂದರು.
ದಿ. ಪುನಿತ್ರಾಜ್ಕುಮಾರ್ ಸ್ಮರಣಾರ್ಥ ಅವರ ಹೆಸರನ್ನೇ ಉಪಗ್ರಹಕ್ಕೆ ಇಡಲಾಗಿದೆ. ಪ್ರಧಾನಿ ಯೋಜನೆಯಡಿ ಉಡಾವಣೆಗೊಳ್ಳುತ್ತಿರುವ ದೇಶದ ಮೊದಲ ಉಪಗ್ರಹ ಇದು. ಉಪಗ್ರಹ ನಿರ್ಮಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಉಪಗ್ರಹ ಅಭಿವೃದ್ದಿ ಯೋಜನೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಬಾಹ್ಯಾಕಾಶ, ಖಗೋಳ ವಿಜ್ಷಾನ, ಅಂತರಿಕ್ಷ ಸೇರಿದಂತೆ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದವರು ಇದೇ ವೇಳೆ ಆಶಿಸಿದರು.