ಮೈಸೂರು, ಅ 26(DaijiworldNews/MS): ಗುತ್ತಿಗೆದಾರರಿಂದ ಪಡೆಯುತ್ತಿರುವ ಶೇ. 40 ರಷ್ಟು ಕಮಿಷನ್ನಲ್ಲಿ ಪಾಲು ಬಿಜೆಪಿಗೆ ಹಾಗೂ ಆರೆಸ್ಸೆಸ್ ಹೋಗುತ್ತಿದೆ. ಇದೇ ಕಾರಣಕ್ಕೆ ಅಧಿಕಾರ ೮ ವರ್ಷದಲ್ಲೇ ರಾಷ್ಟ್ರ ರಾಜಧಾನಿಯಲ್ಲಿ 1,600 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಕಚೇರಿ ನಿರ್ಮಿಸುವ ಜೊತೆಗೆ ಪ್ರತಿ ಜಿಲ್ಲಾ ಕೇಂದ್ರಗಳ ಕಚೇರಿಯನ್ನು ಕಟ್ಟಲಾಗುತ್ತಿದೆ ಇದಕ್ಕೆಲ್ಲಾ ಹಣ ಎಲ್ಲಿಂದ ಬಂತು ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಮಿಷನ್ ದಂಧೆಯ ಆರೋಪದ ಕುರಿತು ಸ್ವತಂತ್ರ ಆಯೋಗದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಅವರು ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ ಎನ್ನುವ ಭಯದಿಂದ ಬಿಜೆಪಿ ಇದಕ್ಕೆ ಒಪ್ಪುತ್ತಿಲ್ಲ ಎಂದು ಆಪಾದಿಸಿದರು.
ಶೇ 40ರಷ್ಟು ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವರ್ಷದ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ, ಮತ್ತೊಮ್ಮೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಧಾನಿಯು ಭ್ರಷ್ಟರನ್ನು ರಕ್ಷಿಸದೆ, ತನಿಖೆಗೆ ಆದೇಶಿಸಲಿ ಎಂದು ಹೇಳಿದರು