ನವದೆಹಲಿ, ಆ 26 (DaijiworldNews/DB): ತಂದೆ ರಾಜು ಶ್ರೀವಾತ್ಸವ್ ಅವರಿಗೆ ಪ್ರಜ್ಞೆ ಬಂದಿಲ್ಲ. ಕಳೆದೆರಡು ವಾರಗಳಿಂದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದು, ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ರಾಜು ಪುತ್ರಿ ಅಂತರಾ ಶ್ರೀವಾತ್ಸವ್ ಹೇಳಿದ್ದಾರೆ.
ಹೃದಯಾಘಾತಕ್ಕೊಳಗಾಗಿ ಆಗಸ್ಟ್ 10 ರಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಸ್ಯ ಕಲಾವಿದ ಹಾಗೂ ಬಾಲಿವುಡ್ ನಟ ರಾಜು ಶ್ರೀವಾತ್ಸವ್ ಅವರಿಗೆ ಪ್ರಜ್ಞೆ ಬಂದಿದೆ ಎಂಬುದಾಗಿ ಕಳೆದೆರಡು ದಿನಗಳಿಂದ ಹರಿದಾಡುತ್ತಿರುವ ಸುದ್ದಿಗೆ ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ ಅವರು, ತಂದೆ ಕಳೆದೆರಡು ವಾರಗಳಿಂದ ತೀವ್ರ ನಿಗಾ ಘಟಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ವೆಂಟಿಲೇಟರ್ನಲ್ಲೇ ಇದ್ದು, ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಏಮ್ಸ್ ಆಸ್ಪತ್ರೆ ಮತ್ತು ರಾಜು ಅವರ ಅಧಿಕೃತ ಅಕೌಂಟ್ನಿಂದ ಬರುವ ಹೇಳಿಕೆಗಳು ಮಾತ್ರ ನಂಬಿಕೆಗೆ ಅರ್ಹವಾಗಿರುತ್ತವೆ. ಸುಳ್ಳು ಸುದ್ದಿಗಳನ್ನು ನಂಬದಿರಿ ಎಂದು ಮನವಿ ಮಾಡಿದ್ದಾರೆ.
ಇನ್ನು ರಾಜು ಶ್ರೀವಾತ್ಸವ್ಗೆ ಪ್ರಜ್ಞೆ ಬಂದಿದೆ ಎಂಬ ಸುದ್ದಿಯನ್ನು ಅವರ ಸಂಬಂಧಿ ಕುಶಾಲ್ ಶ್ರೀವಾತ್ಸವ್ ಕೂಡಾ ತಳ್ಳಿ ಹಾಕಿದ್ದಾರೆ. ರಾಜು ಆರೋಗ್ಯದಲ್ಲಿ ನಿಧಾನಕ್ಕೆ ಸುಧಾರಣೆ ಕಂಡಿದ್ದು, ಆರೋಗ್ಯ ಸುಧಾರಿಸಲು ಸಮಯ ಹಿಡಿಯುತ್ತದೆ. ಕೆಲವು ಬಾರಿ ಕಣ್ಣು ತೆರೆದು, ಕೈ ಅಲುಗಾಡಿಸಿದ್ದಾರೆ. ಆದರೆ ಸಂಪೂರ್ಣವಾಗಿ ಚೇತರಿಕೆ ಕಾಣಬೇಕು ಎಂದವರು ತಿಳಿಸಿರುವುದಾಗಿ ವರದಿಯಾಗಿದೆ.
ನಟ ರಾಜು ಶ್ರೀವಾತ್ಸವ್ ಅವರು ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದ ವೇಳೆ ಉಳಿದುಕೊಂಡಿದ್ದ ಹೊಟೇಲ್ನ ಜಿಮ್ನಲ್ಲಿ ಆಗಸ್ಟ್ 10 ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು.