ನವದೆಹಲಿ, ಆ 26 (DaijiworldNews/DB): ಅಂಬೆಗಾಲಿಡಲು ಕಲಿಯುತ್ತಿದ್ದ ಮಗುವೊಂದು ಬಿದ್ದು ಮೆದುಳು ನಿಷ್ಕ್ರಿಯಗೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಹೀಗಾಗಿ ಮಗುವಿನ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಖಾಸಗಿ ಗುತ್ತಿಗೆದಾರ ಉಪಿಂದರ್ ಎಂಬುವವರ 16 ತಿಂಗಳ ಮಗು ರಿಶಾಂತ್ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ವೇಳೆ ಆಗಸ್ಟ್ 17ರಂದು ಬಿದ್ದು ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗುವಿನ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದರು.
ಮಗುವಿನ ಅಂಗಾಂಗ ದಾನ ಮಾಡಿದರೆ ಹಲವರ ಜೀವಕ್ಕೆ ಬೆಳಕಾಗುತ್ತದೆ ಎಂದು ಏಮ್ಸ್ ವೈದ್ಯರು ರಿಶಾಂತ್ ಪೋಷಕರಿಗೆ ಸಲಹೆ ನೀಡಿದರು. ಹೀಗಾಗಿ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.
ರಿಶಾಂತ್ ಮನೆಯ ಪ್ರೀತಿಯ ಮಗನಾಗಿದ್ದ. ನಾನು ಕೆಲಸಕ್ಕೆ ಹೊರಡುವ ತರಾತುರಿಯಲ್ಲಿದ್ದಾಗ ಆತ ಬಿದ್ದಿದ್ದಾನೆ. ನನ್ನಿಂದ ಆತನನ್ನು ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ. ಅವನ ಅಂಗಾಂಗಗಳಿಂದ ಇತರರ ಜೀವ ಉಳಿಯಲಿ ಎಂಬ ಉದ್ದೇಶದಿಂದ ಅಂಗಾಂಗ ದಾನಕ್ಕೆ ಮುಂದಾಗಿದ್ದೇವೆ ಎಂದು ರಿಶಾಂತ್ ತಂದೆ ಉಪೀಂದರ್ ಭಾವುಕರಾಗಿ ಹೇಳಿದರು ಎಂದು ವರದಿಯಾಗಿದೆ.