ಬೆಂಗಳೂರು, ಆ 25 (DaijiworldNews/SM): ಪರ್ಸೆಂಟೇಜ್ ಕೊಡೋದು ಯಾಕೆ? ಕಮಿಷನ್ ಕೊಡಲೇಬೇಕು ಎಂದಾದಲ್ಲಿ ಕಾಮಗಾರಿಯನ್ನೇ ಕೈಗೆತ್ತಿಕೊಳ್ಳಬೇಡಿ. ಕೆಲಸವನ್ನು ಸ್ಥಗಿತಗೊಳಿಸಿ ಆಗ ಎಲ್ಲವೂ ತನ್ನಿಂದ ತಾನಾಗಿಯೇ ಸರಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುತ್ತಿಗೆದಾರರಿಗೆ ಹೇಳಿದ್ದಾರೆ.
ಟೆಂಡರ್ ನಲ್ಲಿ ಭಾಗವಹಿಸುವುದು ಬಿಟ್ಟು ಸರಕಾರಕ್ಕೆ ಬಿಸಿ ಮುಟ್ಟಿಸಿ. ಪರ್ಸಂಟೇಜ್ ವಿರುದ್ಧ ಬೀದಿಗೆ ಇಳಿಯಿರಿ. ದಾಖಲೆಗಳನ್ನು ಜನರ ಮುಂದಿಡಿ. ಸುಖಾಸುಮ್ಮನೆ ಹೇಳಿಕೆಗಳಿಂದ ಪ್ರಯೋಜನ ಇಲ್ಲ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ, 40 ಪರ್ಸೆಂಟ್ ಕಮೀಷನ್ ಬಗ್ಗೆ ಕೆಲ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಯಾವುದಾದರೂ ಸಾಕ್ಷಿ ಇದ್ದರೆ ತನಿಖೆ ನಡೆಸುವುದಾಗಿ ಸರಕಾರ ಹೇಳುತ್ತಿದೆ. ತನಿಖೆಗೆ ಕೊಟ್ಟರೆ ಸಾಕ್ಷಿ ಕೊಡುತ್ತೇವೆಂದು ಗುತ್ತಿಗೆದಾರರು ಹೇಳುತ್ತಾರೆ. ಇದರಿಂದ ಪ್ರಯೋಜನ ಆಗಲ್ಲ ಎಂದರು.
ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಈ ಪರ್ಸಂಟೇಜ್ ಏನೂ ಇರಲಿಲ್ಲ. ನಾನು ಲಾಟರಿ ನಿಷೇಧ ಮಾಡಿದಾಗ ಇದ್ದ ಕಿಂಗ್ ಪಿನ್ ಗಳು, ಮಂತ್ರಿಗಳು ಎಷ್ಟೆಷ್ಟು ಆಫರ್ ಕೊಟ್ಟರು ಎನ್ನುವುದು ಗೊತ್ತಿದೆ. ಆ ಆಫರ್ ಕೊಟ್ಟವರು ಇನ್ನೂ ಬದುಕಿದ್ದಾರೆ. ಆದರೂ ಎಲ್ಲವನ್ನು ಧಿಕ್ಕರಿಸಿ ಲಾಟರಿ ನಿಷೇಧ ಮಾಡಿದ್ದೆ. ಅಂತಹ ಬದ್ಧತೆ ಈ ಸರಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದರು.