ಬೆಂಗಳೂರು, ಆ 25 (DaijiworldNews/SM): ರಾಜ್ಯ ಸರಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಗುತ್ತಿಗೆದಾರರು ಕಮಿಷನ್ ಕೊಡಬೇಕಾದ ಪರಿಸ್ಥಿತಿ ಇರುವುದು ನಿಜ. ಪ್ರತಿಪಕ್ಷವಾಗಿ ನಾವು ಧ್ವನಿ ಎತ್ತುವುದು ತಪ್ಪಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವುದು ಹೊಸತೇನಲ್ಲ. ಚಾಮರಾಜನಗರ ರೈತ ಸಂಘದವರು, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ವಿಚಾರವಾಗಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ನನಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಳೆದ ಒಂದು ವರ್ಷದಿಂದ ನನ್ನನ್ನಾಗಲಿ, ಸಿದ್ದರಾಮಯ್ಯ ಅವರನ್ನಾಗಲಿ ಭೇಟಿ ಮಾಡಿರಲಿಲ್ಲ. ಆದರೆ ಬುಧವಾರ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಇದಕ್ಕೂ ಮುನ್ನ ಕೆಲವು ತಿಂಗಳ ಹಿಂದೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಕೆಂಪಣ್ಣ ಅವರು ಕಾಂಗ್ರೆಸ್ ಏಜೆಂಟರಾಗಿದ್ದರೆ ಮುಖ್ಯಮಂತ್ರಿಯವರು ಅವರನ್ನು ಭೇಟಿ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.