ನವದೆಹಲಿ, ಆ 25 (DaijiworldNews/DB): ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ.
ಸೊನಾಲಿಯೊಂದಿಗೆ ಆಕೆಯ ಇಬ್ಬರು ಸಹಚರರು ಗೋವಾಕ್ಕೆ ತೆರಳಿದ್ದು, ಅವರೇ ಆಕೆಯನ್ನು ಕೊಲೆಗೈದಿದ್ದಾರೆಂದು ಸೋನಾಲಿ ಸಹೋದರ ರಿಂಕು ಧಾಕಾ ಆರೋಪಿಸಿದ್ದರು. ಅಲ್ಲದೆ ಇಬ್ಬರ ಮೇಲೂ ಪ್ರಕರಣ ದಾಖಲಿಸದೆ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡುವುದಿಲ್ಲ ಎಂದಿದ್ದರು. ಬಳಿಕ ಸಂಪೂರ್ಣ ಪರೀಕ್ಷೆಯ ಕಾರ್ಯವಿಧಾನಗಳನ್ನು ವೀಡಿಯೋ ಚಿತ್ರೀಕರಣ ಮಾಡಬೇಕೆಂಬ ಷರತ್ತಿನೊಂದಿಗೆ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿದ್ದರು. ಇದೀಗ ಸಂಜೆ ವೇಳೆಗೆ ಪ್ರಕರಣ ಸಂಬಂಧ ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಉತ್ತರ ಗೋವಾ ಜಿಲ್ಲೆಯ ಅಂಜುನಾ ಪ್ರದೇಶದ ಸೇಂಟ್ ಆಂಥೋನಿ ಆಸ್ಪತ್ರೆಯಲ್ಲಿ ಸೋನಾಲಿ ಸಾವನ್ನಪ್ಪಿದ್ದರು. ಆ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಇದನ್ನು ಕುಟುಂಬದವರು ಅಲ್ಲಗಳೆದಿದ್ದರು. ಸಾವಿಗೂ ಮುನ್ನ ರಾತ್ರಿ ಆಕೆ ತಾಯಿ, ಸಹೋದರಿ, ಸೋದರ ಮಾವನಿಗೆ ಕರೆ ಮಾಡಿದ್ದು, ಊಟ ಮಾಡಿದ ಬಳಿಕ ಸಂಕಟವಾಗುತ್ತಿದೆ ಎಂದಿದ್ದಳು. ಅಲ್ಕದೆ ತನ್ನ ಸಹಚರರ ಬಗ್ಗೆ ದೂರಿದ್ದಳು ಎಂದು ಸಹೋದರ ಆಪಾದಿಸಿದ್ದರು.