ನವದೆಹಲಿ, ಆ 25 (DaijiworldNews/DB): ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸೆಪ್ಟೆಂಬರ್ 3 ರಿಂದ ಕಾರ್ಯಾಭಿಸಲಿದೆ. ಆ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಖಾತ್ರಿಗೆ ಕೊಡುಗೆ ನೀಡಲಿದೆ.
ನೌಕೆ ಕಾರ್ಯಾರಂಭದ ಕುರಿತು ಮಾಹಿತಿ ನೀಡಿದ ಭಾರತೀಯ ನೌಕಾಪಡೆಯ ಉಪಾಧ್ಯಕ್ಷ ವೈಸ್ ಅಡ್ಮಿರಲ್ ಎಸ್ಎನ್ ಘೋರ್ಮಾಡೆ, ಕೊಚ್ಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಸೆಪ್ಟಂಬರ್ನಲ್ಲಿ ವಿಕ್ರಾಂತ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡು ಕಾರ್ಯಾರಂಭಿಸಲಿದೆ. ದೇಶದ ಒಟ್ಟಾರೆ ಸಾಗರ ಸಾಮರ್ಥ್ಯ ಹೆಚ್ಚಳದಲ್ಲಿ ಈ ನೌಕೆಯು ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಈ ನೌಕೆಯು ಸುಮಾರು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 2,300 ಕ್ಕೂ ಹೆಚ್ಚು ಕಂಪಾರ್ಟ್ಮೆಂಟ್ಗಳು ನೌಕೆಯಲ್ಲಿವೆ. ಮಹಿಳಾ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್ಗಳಿವೆ. ಸುಮಾರು 1700 ಸಿಬಂದಿಯನ್ನು ಹೊರುವ ಸಾಮರ್ಥ್ಯ ಇದಕ್ಕಿದೆ. ಸಮುದ್ರದಲ್ಲಿ ನಾಲ್ಕನೇ ಮತ್ತು ಅಂತಿಮ ಹಂತದ ಪ್ರಯೋಗಗಳನ್ನು ವಿಕ್ರಾಂತ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
262 ಮೀಟರ್ ಉದ್ದ, 62 ಮೀಟರ್ ಅಗಲ, 59 ಮೀಟರ್ ಎತ್ತರದ ನೌಕೆಯುಸುಮಾರು 28 ನಾಟಿಕಲ್ ಗರಿಷ್ಠ ವೇಗ ಹೊಂದಿರುವ ವಿಕ್ರಾಂತ್ ಸುಮಾರು 7,500 ನಾಟಿಕಲ್ ಮೈಲುಗಳ ಸಹಿಷ್ಣುತೆ, 18 ನಾಟಿಕಲ್ ಗಳ ಪ್ರಯಾಣ ವೇಗ ಹೊಂದಿರುವ ತಾಂತ್ರಿಕತೆಯೊಂದಿಗೆ ರೂಪುಗೊಂಡಿದೆ. ನಾಲ್ಕು ಗ್ಯಾಸ್ ಟರ್ಬೈನ್ಗಳಿಂದ ಒಟ್ಟು 88 ಮೆಗಾವ್ಯಾಟ್ ಶಕ್ತಿ, ಗರಿಷ್ಠ 28 ನಾಟ್ಸ್ ವೇಗ ಹೊಂದಿರುವ ಅತ್ಯದ್ಭುತವಾದ ಸ್ವದೇಶಿ ನಿರ್ಮಿತ ನೌಕೆ ಇದಾಗಿದೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.