ನವದೆಹಲಿ, ಆ 25 (DaijiworldNews/DB): ಗುಜರಾತ್ ಗಲಭೆಯಲ್ಲಿ ಬದುಕುಳಿದಿರುವ ಬಿಲ್ಕಿಸ್ ಬಾನುಗೆ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗ್ರಹಿಸಿದ್ದಾರೆ.
ಈ ಕುರಿತು ವಿಶೇಷ ಆಗ್ರಹ ಮಾಡಿರುವ ಅವರು, 2002ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಏಳು ಕುಟುಂಬ ಸದಸ್ಯರ ಕೊಲೆ ಪ್ರಕರಣದಲ್ಲಿ 11 ಮಂದಿ ಶಿಕ್ಷೆಗೊಳಗಾಗಿದ್ದರು. ಆದರೆ ಶಿಕ್ಷಿತರು ಇದೀಗ ಬಿಡುಗಡೆ ಭಾಗ್ಯ ಪಡೆದಿದ್ದಾರೆ. ಅಪರಾಧಿಗಳ ಬಿಡುಗಡೆ ಸಂಬಂಧಪಟ್ಟಂತೆ ಸರ್ಕಾರ ಏನನ್ನೂ ಮಾತನಾಡದೆ ಮೌನವಹಿಸಿದ್ದು, ಆ ಮೂಲಕ ತನ್ನ ನಿಲುವೇನೆಂಬುದನ್ನು ಸ್ಪಷ್ಟಪಡಿಸಿದೆ ಎಂದವರು ಟ್ವೀಟ್ ಮಾಡಿದ್ದಾರೆ.
ದೇಶದ ಮಹಿಳೆಯರು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದಾರೆ. ಕೊನೆ ಸಾಲಿನಲ್ಲಿ ನ್ಯಾಯಕ್ಕಾಗಿ ನಿಂತ ಮಹಿಳೆಗೂ ಧೈರ್ಯ ತುಂಬುವ ಕೆಲಸವನ್ನು ಭಾರತೀಯ ಸಂವಿಧಾನ ಮಾಡುತ್ತದೆ. ಬಿಲ್ಕಿಸ್ ಬಾನುಗೆ ನ್ಯಾಯ ನೀಡುವ ಕೆಲಸ ಸರ್ಕಾರದಿಂದ ಆಗಬೇಕು ಎಂದವರು ಒತ್ತಾಯಿಸಿದ್ದಾರೆ.