ಬೆಂಗಳೂರು, ಅ 25 (DaijiworldNews/MS): ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬುಧವಾರದಂದು ಬಿಡುಗಡೆ ಮಾಡಿದ್ದ 21 ವಿವಿಧ ಟ್ರಸ್ಟ್ ಮತ್ತು ಪ್ರತಿಷ್ಠಾನಗಳ ನೂತನ ಅಧ್ಯಕ್ಷರು ಮತ್ತು ಸದಸ್ಯರ ಆದೇಶ ಪಟ್ಟಿಯನ್ನು ಸರ್ಕಾರ ಗುರುವಾರ ಹಿಂಪಡೆದಿದೆ.
ಚಿಕ್ಕಮಗಳೂರಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ , ಕಳೆದ ವರ್ಷ ಮೃತಪಟ್ಟಿರುವ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಗಳಲ್ಲಿ ಆಕ್ಷೇಪ ವ್ಯಕ್ತವಾಗಿದ್ದವು.
ಇದೇ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ಸಾಹಿತಿ ನರೇಂದ್ರ ರೈ ದೇರ್ಲ ಅವರನ್ನು ನೇಮಿಸಲಾಗಿತ್ತು. ಆದರೆ, ಅವರು ‘ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ’ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಇನ್ನು ಹಾವೇರಿಯ ಗಳಗನಾಥ ಹಾಗೂ ನಾ.ಶ್ರೀ. ರಾಜಪುರೋಹಿತ ಟ್ರಸ್ಟ್ಗೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. "ಈ ಗೌರವವನ್ನು ನಾನು ಮರಳಿಸುತ್ತಿದ್ದೇನೆ" ಎಂದು ಸೂಲಿಬೆಲೆಯೂ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದರು.