ನವದೆಹಲಿ, ಆ 25 (DaijiworldNews/DB): ಬಿಜೆಪಿಯಿಂದ ಎಎಪಿ ಶಾಸಕರಿಗೆ ಆಮಿಷವೊಡ್ಡುತ್ತಿರುವ ಕುರಿತು ಚರ್ಚಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ನಿವಾಸದಲ್ಲಿ ಕರೆದಿರುವ ಮಹತ್ವದ ಸಭೆಗೆ 62 ಮಂದಿ ಶಾಸಕರು ಹಾಜರಾಗಿದ್ದು, ಉಳಿದ 12 ಮಂದಿ ದೂರವಾಣಿ ಕರೆಗೆ ಲಭ್ಯವಾಗಿದ್ದಾರೆ.
ಕೇಜ್ರೀವಾಲ್ ಅವರು ಇಂದು ಬೆಳಗ್ಗೆ 11 ಗಂಟೆಗೆ ತಮ್ಮ ನಿವಾಸದಲ್ಲಿ ಸಭೆ ಕರೆದಿದ್ದರು. ಆದರೆ ಇದಕ್ಕೂ ಮುನ್ನ ಪಕ್ಷದ ಎಲ್ಲಾ ಶಾಸಕರಿಗೆ ಕರೆ ಮಾಡಿ ಪಕ್ಷದ ಸಭೆಯಲ್ಲಿ ಭಾಗವಹಿಸಲು ಹೇಳಲಾಗಿತ್ತು. ಆದರೆ ಒಟ್ಟು 62 ಶಾಸಕರ ಪೈಕಿ ಹನ್ನೆರಡು ಮಂದಿ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಹನ್ನೆರಡು ಮಂದಿಯ ಗೈರು ಹಾಜರಿಯ ನಡುವೆ ಸಭೆ ನಡೆಯಿತಾದರೂ, ಬಳಿಕ ಈ ಎಲ್ಲಾ ಶಾಸಕರು ಫೋನ್ ಕರೆಗೆ ಲಭ್ಯವಾಗಿ ಸರ್ಕಾರದೊಂದಿಗೆ ತಾವಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ದೆಹಲಿ ಸರ್ಕಾರ ಭದ್ರವಾಗಿದೆ ಎಂದು ಸಿಎಂ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ.
ಪಕ್ಷದ ಹಿರಿಯ ಮುಖಂಡ ಸೌರವ್ ಭಾರಧ್ವಾಜ್ ಮಾತನಾಡಿ, ದೆಹಲಿ ಸರ್ಕಾರ ಯಾವುದೇ ಕಾರಣಕ್ಕೂ ಪತನವಾಗುವುದಿಲ್ಲ ಎಂದು ನಾವು ಜನರಿಗೆ ಭರವಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಎಎಪಿ ತೊರೆದು ಬಿಜೆಪಿ ಸೇರಿದರೆ ಸಿಎಂ ಸ್ಥಾನ ನೀಡುವುದಾಗಿ ಹಾಗೂ ಸಿಬಿಐ ಮತ್ತು ಇ.ಡಿ ಪ್ರಕರಣ ಕೈ ಬಿಡುವುದಾಗಿ ತಮಗೆ ಬಿಜೆಪಿಯಿಂದ ಆಮಿಷ ಬಂದಿತ್ತು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದರು. ಶಾಸಕರಾದ ಅಜಯ್ ದತ್, ಸಂಜೀವ್ ಜಾ, ಸೋಮನಾಥ ಭಾರತಿ ಮತ್ತು ಕುಲದೀಪ್ ಅವರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ. ಬಿಜೆಪಿ ಸೇರಿದರೆ ತಲಾ 20 ಕೋಟಿ ಮತ್ತು ಇತರೆ ಶಾಸಕರನ್ನು ಕರೆ ತಂದರೆ 25 ಕೋಟಿ ರೂ. ನೀಡುವ ಆಮಿಷ ಒಡ್ಡಿದ್ದರು ಎಂದು ಎಎಪಿಯ ರಾಷ್ಟ್ರೀಯ ವಕ್ತಾರ ಸಂಜಯ್ ಸಿಂಗ್ ಆಪಾದಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕುರಿತು ಚರ್ಚಿಸಲು ಸಭೆ ಕರೆದಿದ್ದರು.